ಚುನಾವಣೆ ವೇಳೆ ಕೋಟ್ಯಂತರ ಹಣ ಸಾಗಣೆ ಶಂಕೆ : 10 ಪ್ರಭಾವಿಗಳ ಮನೆ ಮೇಲೆ ಐಟಿ ದಾಳಿ

ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ, ಸಿಎಸ್ ಪುಟ್ಟರಾಜು, ಎಂಎಲ್‌ಸಿ ಬಿಎಂ ಫಾರೂಕ್ ಸೇರಿದಂತೆ 10 ಪ್ರಭಾವಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚುನಾವಣೆ ವೇಳೆ ಕೋಟ್ಯಂತರ ಹಣ ಸಾಗಣೆ ಶಂಕೆ ಹಿನ್ನೆಲೆ ಐಟಿ ದಾಳಿ ನಡೆಸಲಾಗಿದೆ. ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ ಭಾಗದಲ್ಲಿ ಹಣ ಸಾಗಣೆ ಶಂಕೆ ಹಿನ್ನೆಲೆ ದಾಳಿ ನಡೆದಿದೆ. ಮಂಡ್ಯಕ್ಕೆ ಹಣ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಚುನಾವಣಾ ಅಕ್ರಮದ ಬಗ್ಗೆ ವಾರದಿಂದ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಮೈಸೂರು, ಮಂಡ್ಯದಲ್ಲಿ ಅಕ್ರಮವಾಗಿ ಹಣ ಸಾಗಾಟದಲ್ಲಿ ಸಚಿವ ಸಿ.ಎಸ್. ಪುಟ್ಟರಾಜು ಪ್ರಮುಖ ಪಾತ್ರ ವಹಿಸಿರುವ ಅನುಮಾನದಿಂದ ದಾಳಿ ನಡೆಸಿದ್ದಾರೆ.

ಎಚ್​.ಡಿ. ರೇವಣ್ಣ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯ ಹಾಸನ ಕಚೇರಿ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಹಾಸನದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರ ವಿಚಾರಣೆ ನಡೆಸಲಾಗುತ್ತಿದೆ. ಹಾಗೇ, ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಡತಗಳ ಪರಿಶೀಲನೆ ಮಾಡಲಾಗುತ್ತಿದೆ.

ಸಿಎಂ ಆಪ್ತ ಸಿಎಸ್ ಪುಟ್ಟರಾಜು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಅತ್ತ ಸಚಿವ ಎಚ್ ಡಿ ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ರಾಯಗೌಡ ಅವರ ಚೆನ್ನರಾಯಪಟ್ಟಣದ ನಿವಾಸವೂ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮಂಡ್ಯದಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳ ಮತ್ತೊಂದು ತಂಡವೇ ಈ ದಾಳಿ ಮಾಡಿದ್ದು, ಸುಮಾರು 10 ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಎಚ್ ಡಿ ರೇವಣ್ಣ ಅವರ ಮೂವರು ಆಪ್ತರಿಗೆ ಸೇರಿದೆ ಎನ್ನಲಾದ 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com