ಹಾಕಿ ಟೂರ್ನಿ : ಭಾರತ, ಮಲೇಷ್ಯಾ ತಂಡದ ವಿರುದ್ಧ ಮೂರನೇ ಪಂದ್ಯದಲ್ಲಿ ಕಾದಾಟ

ಇಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತ, ಮಲೇಷ್ಯಾ ತಂಡದ ವಿರುದ್ಧ ಮೂರನೇ ಪಂದ್ಯದಲ್ಲಿ ಕಾದಾಟ ನಡೆಸಲಿದೆ.

ಮೊದಲ ಪಂದ್ಯದಲ್ಲಿ ಭಾರತ 2-0 ಯಿಂದ ಜಪಾನ್ ವಿರುದ್ಧ, ಎರಡನೇ ಪಂದ್ಯದಲ್ಲಿ 1-1 ರಿಂದ ಕೊರಿಯಾ ವಿರುದ್ಧ ಸಮಬಲ ಸಾಧಿಸಿದ ಭಾರತ, ಸದ್ಯ ಅಂಕ ಪಟ್ಟಿಯಲ್ಲಿ 2 ಪಂದ್ಯಗಳಿಂದ 4 ಅಂಕ ಕಲೆ ಹಾಕಿ ಮೂರನೇ ಸ್ಥಾನದಲ್ಲಿದೆ. ಮನ್ ದೀಪ್ ಪಡೆ ಶ್ರೇಯಾಂಕ ಪಟ್ಟಿಯಲ್ಲಿ ಮಲೇಷ್ಯಾಗಿಂತ ಉತ್ತಮ ಸ್ಥಾನ ಹೊಂದಿದೆ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಮಲೇಷ್ಯಾ ಆಡಿದ ಆಟ ಭಾರತ ತಂಡದ ನಿದ್ದೆಗೆಡಿಸಿದೆ. ಮಲೇಷ್ಯಾ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನು ಭಾರತ ಕಳೆದ ಪಂದ್ಯದಲ್ಲೂ ಕೊನೆಯ ಕ್ಷಣದಲ್ಲಿ ಮಾಡಿದ ಎಡವಟ್ಟಿನಿಂದ ಅಂಕವನ್ನು ಹಂಚಿಕೊಳ್ಳಬೇಕಾಯಿತು. ಮಂಗಳವಾರ ನಡೆಯುವ ಪಂದ್ಯದಲ್ಲಿ ಹಿಂದಿನ ನ್ಯೂನತೆಗಳನೆಲ್ಲಾ ಮೆಟ್ಟಿ ನಿಂತು ಉತ್ತಮ ಪ್ರದರ್ಶನ ತೋರುವ ವಿಶ್ವಾಸ ಭಾರತ ತಂಡದ್ದಾಗಿದೆ.

ಎರಡನೇ ಪಂದ್ಯದಲ್ಲಿ ಮನ್ ದೀಪ್ ಮನಮೋಹಕ ಗೋಲು ಬಾರಿಸಿ ಮಿಂಚಿದ್ದರು. ಮೂರನೇ ಪಂದ್ಯದಲ್ಲೂ ಆರ್ಭಟಿಸುವ ಲೆಕ್ಕಾಚಾರವನ್ನು ಅವರು ಹಾಕಿಕೊಂಡಿದ್ದಾರೆ. ಇನ್ನು ರಕ್ಷಣಾ ವಿಭಾಗದ ಆಟಗಾರರು ಎದುರಾಳಿಗೆ ಗೋಲು ನೀಡದಂತೆ ತಡೆಯಲು ಬೇಕಾದ ರಣ ತಂತ್ರವನ್ನು ಹೆಣೆದುಕೊಂಡಿದ್ದಾರೆ.

ಈ ಸಾಲಿನ ಸುಲ್ತಾನ್ ಅಜ್ಲಾನ್ ಶಾ ಟೂರ್ನಿಯಲ್ಲಿ ಐದು ಗೋಲು ಬಾರಿಸಿರುವ ಮಲೇಷ್ಯಾದ ಫೈಜಲ್ ರನ್ನು ಕಟ್ಟಿಹಾಕಲು ಬೇಕಾದ ಯೋಜನೆಯನ್ನು ಭಾರತೀಯ ಆಟಗಾರರು ಮಾಡಿಕೊಂಡಿದ್ದಾರೆ. ಈ ಪಂದ್ಯ ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸಿನಿಂದ ಭಾರತ ಅಂಗಳ ಪ್ರವೇಶಿಸಲಿದೆ.

Leave a Reply

Your email address will not be published.

Social Media Auto Publish Powered By : XYZScripts.com