“ಭಯೋತ್ಪಾದನೆಗೆ ನೆಲೆ ನೀಡುವುದನ್ನು ನಿಲ್ಲಿಸಿ” ಎಂದು ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಎಚ್ಚರಿಕೆ

“ಭಯೋತ್ಪಾದನೆಗೆ ನೆಲೆ ನೀಡುವುದನ್ನು ಮೊದಲು ನಿಲ್ಲಿಸಿ” ಎಂದು ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದೆ. “ನಾವು 9/11 ರ ದಾಳಿಯಿಂದ ಕಲಿತ ಪಾಠವನ್ನು ಮರೆತಿಲ್ಲ. ಇಂದು ಭಾರತಕ್ಕೆ ಏನಾಯಿತು(ಪುಲ್ವಾಮಾ ದಾಳಿ) ಎಂಬುದನ್ನು ನಾವು ನೋಡಿದ್ದೇವೆ. ಇದಕ್ಕೆಲ್ಲ ಕಾರಣ ಪಾಕಿಸ್ತಾನ ಭಯೋತ್ಪಾದಕರಿಗೆ ನೆಲೆ ನೀಡಿದ್ದು” ಎಂದು ನೇರವಾಗಿಯೇ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೊ ಪಾಕಿಸ್ತಾನ ಅಪರಾಧಿ ಎಂದು ಆರೋಪಿಸಿದರು.

ಭಯೋತ್ಪಾದನೆಯನ್ನು ಹತ್ತಿಕ್ಕಲು ಮತ್ತು ಭಯೋತ್ಪಾದಕರನ್ನು ಮುಗಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನ ಯಾವುದಕ್ಕೂ ಸಾಲದು, ಆ ನಿಟ್ಟಿನಲ್ಲಿ ಅದು ಮತ್ತಷ್ಟು ಪ್ರಯತ್ನಿಸಬೇಕಿದೆ ಎಂದು ಪೊಂಪಿಯೋ ಹೇಳಿದರು.

ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತದ ಬೆಂಬಲಕ್ಕೆ ನಿಂತಿದ್ದ ಅಮೆರಿಕ, ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲೂ, ಉಗ್ರ ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಪ್ರಸ್ತಾವ ಮುಂದಿಟ್ಟಿತ್ತು. ಇದಕ್ಕೆ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳೂ ಸಹಕರಿಸಿದ್ದವು. ಆದರೆ ಚೀನಾ ಅಡ್ಡಗಾಲು ಹಾಕಿದ ಪರಿಣಾಮ ಅದಾಗಲಿಲ್ಲ.

ಭಯೋತ್ಪಾದಕರಿಗೆ ನೆಲೆ ನೀಡುವುದನ್ನು ಬಿಡಿ ಎಂದು ಈ ಮೊದಲೂ ಅಮೆರಿಕ, ಪಾಕಿಸ್ತಾನಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.  ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೈನಿಕರಿದ್ದ ವಾಯನದಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ, 44 ಯೋಧರು ಹುತಾತ್ಮರಾಗುವಂತೆ ಮಾಡಿತ್ತು. ಈ ಘಟನೆಗೆ ಪ್ರತೀಕಾರ ಎಂಬಂತೆ ಫೆ.26 ರಂದು ಭಾರತ ಪಾಕಿಸ್ತಾನದಲ್ಲಿರುವ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 250-300 ಉಗ್ರರು ಸತ್ತಿರಬಹುದು ಎನ್ನಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com