ಲೋಕಸಭೆ ಚುನಾವಣೆ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಹೊಡೆತ : ಎ ಮಂಜು ಬಿಜೆಪಿ ಸೇರ್ತಾರಂತೆ..!

ಲೋಕಸಭೆ ಚುನಾವಣೆ ನಡೆಯುವ ಮುನ್ನವೇ ಮೈತ್ರಿಕೂಟಕ್ಕೆ, ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಹೊಡೆತ ಬೀಳಲಿದೆ. ಈ ಸುದ್ದಿ ನಿಜವೇ ಆದರೆ, ಜಾತ್ಯತೀತ ಜನತಾ ದಳ ಕೂಡ ಪತರಗುಟ್ಟಿ ಹೋಗುವುದು ಗ್ಯಾರಂಟಿ.

ಅದೇನೆಂದರೆ, ಮೈತ್ರಿ ಸರಕಾರ ರಚಿಸಿದಂದಿನಿಂದ ಬೇಸರ ವ್ಯಕ್ತಪಡಿಸುತ್ತಲೇ ಇದ್ದ ಕಾಂಗ್ರೆಸ್ಸಿನ ಹಿರಿಯ ನಾಯಕ, ಅರಕಲಗೂಡು ಮಾಜಿ ಶಾಸಕ ಎ ಮಂಜು ಅವರು, ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿ, ಭಾರತೀಯ ಜನತಾ ಪಕ್ಷ ಸೇರುತ್ತಾರೆ ಎಂಬುದು.

ಹಾಸನದಲ್ಲಿ ದೇವೇಗೌಡರ ವಿರುದ್ಧ ಮೊದಲಿನಿಂದಲೂ ಸೆಡ್ಡು ಹೊಡೆಯುತ್ತಲೇ ಬಂದಿರುವ ಎ ಮಂಜು ಅವರು, ಹಾಸನ ಲೋಕಸಭೆ ಕ್ಷೇತ್ರದಲ್ಲಿ ದೇವೇಗೌಡರು ತಮ್ಮ ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ನಿಲ್ಲುವುದಾದರೆ ನಾವ್ಯಾರೂ ಪ್ರಚಾರ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಎ ಮಂಜು ಅವರು ದೇವೇಗೌಡರ ವಿರುದ್ಧ ಕಾಂಗ್ರೆಸ್ಸಿನಿಂದ ಸೆಣಸಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ, ಈ ಬಾರಿ ಮೈತ್ರಿ ಸರಕಾರವಿರುವುದರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಬೇಕೆಂದು ಮಂಜು ಪಟ್ಟು ಹಿಡಿದಿದ್ದರು. ದೇವೇಗೌಡರು ಈ ಕ್ಷೇತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

ಹಾಸನದ ಶಾಸಕ ಪ್ರೀತಂ ಗೌಡ ಅವರ ಮುಂದಾಳತ್ವದಲ್ಲಿ ಎ ಮಂಜು ಅವರು ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿದ್ದು, ಲೋಕಸಭೆ ಚುನಾವಣೆಯಲ್ಲಿ ದೇಶದ ಭದ್ರತೆಯ ಹಿತದೃಷ್ಟಿಯಿಂದ ಬಿಜೆಪಿ ಗೆಲ್ಲುವುದು ಅನಿವಾರ್ಯವಾಗಿರುವುದರಿಂದ, ಎ ಮಂಜು ಅವರು ಬಿಜೆಪಿ ಸೇರಿ ಬಿಜೆಪಿಯನ್ನು ಬಲಪಡಿಸಲಿದ್ದಾರೆ ಎಂದು ಪ್ರೀತಂ ಗೌಡ ಅವರು ಈಗಾಗಲೆ ಹೇಳಿಕೆ ನೀಡಿ ಕುತೂಹಲ ಹುಟ್ಟಿಸಿದ್ದಾರೆ. ಹಾಸನದ ಶಾಸಕ ಪ್ರೀತಂ ಗೌಡ ಅವರ ಮನೆಯಲ್ಲಿ ಇಂದು ಉಪಾಹಾರವನ್ನು ಸೇವಿಸಿರುವುದು ಕೂಡ ಹಲವಾರು ಊಹಾಪೋಹಗಳಿಗೆ ಗ್ರಾಸವಾಗಿದೆ. ಮೊದಲಿನಿಂದಲೂ ಎ ಮಂಜು ಅವರದು ರೇವಣ್ಣ ಜೊತೆ ಎಣ್ಣೆ ಸೀಗೆಕಾಯಿ ಸಂಬಂಧ. ಈಗ ರೇವಣ್ಣ ಅವರ ಮಗನೇ ಹಾಸನದಿಂದ ಲೋಕಸಭೆ ಸ್ಪರ್ಧಿಸುತ್ತಿರುವುದು ಎ ಮಂಜು ಅವರಿಗೆ ನುಂಗಲಾರದ ತುತ್ತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com