ನ್ಯೂಜಿಲೆಂಡ್ ಭೀಕರ ಹತ್ಯಾಕಾಂಡದ ಕಾರಣಕರ್ತರು ಆಸ್ಟ್ರೇಲಿಯಾದ ಉಗ್ರವಾದಿಗಳು..!

ಕರಾಳ ಶುಕ್ರವಾರದಂದು ನ್ಯೂಜಿಲೆಂಡ್ ನ ಎರಡು ಮಸೀದಿಗಳಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಸಾವಿಗೀಡಾದವರ ಸಂಖ್ಯೆ 49ಕ್ಕೇರಿದೆ. ಇದಕ್ಕೆ ಕಾರಣರಾದ ನಾಲ್ವರನ್ನು ಬಂಧಿಸಲಾಗಿದ್ದು, ಅವರನ್ನು ಆಸ್ಟ್ರೇಲಿಯಾದ ಉಗ್ರವಾದಿಗಳು ಎಂದು ಗುರಿತಿಸಲಾಗಿದೆ. ಹೆಲ್ಮೆಟ್ ಧರಿಸಿ, ಮಿಲಿಟರ್ ದಿರಿಸಿನಲ್ಲಿ ಬಂದಿದ್ದ ವ್ಯಕ್ತಿ ಅಲ್ ನೂರ್ ಮಸೀದಿಯಲ್ಲಿ ನಡೆಸಿದ ಮಾರಣಹೋಮವನ್ನು ಲೈವ್ ಶೂಟ್ ಮಾಡಿದ್ದಾನೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ಅಡ್ಡಾಡುತ್ತಿದ್ದು, ಹತ್ಯಾಕಾಂಡದ ಭೀಕರತೆಯನ್ನು ಮತ್ತಷ್ಟು ಭಯಾನಕವಾಗಿಸಿದೆ. “ಇದು ನ್ಯೂಜಿಲೆಂಡ್ ನ ಇತಿಹಾಸದಲ್ಲಿಯೇ ಅತ್ಯಂತ ಕರಾಳ ದಿನ. ಇಂಥ ಹಿಂಸಾತ್ಮಕ ಕೃತ್ಯ ಹಿಂದೆಂದೂ ಜರುಗಿರಲಿಲ್ಲ. ಇದು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪೂರ್ವ ಯೋಜನೆಯಿಂದ ಮಾಡಲಾದ ಭಯೋತ್ಪಾದಕ ದಾಳಿ ಎಂಬುದು ಸ್ಪಷ್ಟವಾಗಿದೆ” ಎಂದು ನ್ಯೂಜಿಲೆಂಡ್ ನ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಲ್ಲಿ ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆಯಿದೆ. ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದಿದೆಯಾದರೂ ಅಲ್ ನೂರ್ ಮಸೀದಿಯಲ್ಲಿ ಹೆಚ್ಚಿನ ಸಾವು ಸಂಭವಿಸಿದೆ.

ಈ ದಾಳಿ ನಡೆಸಿದ ವ್ಯಕ್ತಿಯ ಚಿತ್ರ ಕೂಟ ಟ್ವಿಟ್ಟರ್ ನಲ್ಲಿ ಅಲೆದಾಡುತ್ತಿದ್ದು, ಆತ ಆಸ್ಟ್ರೇಲಿಯಾದವನಾಗಿದ್ದು, ಬಲಪಂಥೀಯ ಭಯೋತ್ಪಾದಕ, ವಯೊಲೆಂಟ್ ಟೆರರಿಸ್ಟ್ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಹೇಳಿಕೆ ನೀಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಬಂಧಿತ ನಾಲ್ವರಲ್ಲಿ ಓರ್ವ ಮಹಿಳೆಯೂ ಇರುವುದು. ಈ ಹತ್ಯೆಗೆ ಮೂಲ ಉದ್ದೇಶವೇನೆಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಈ ಹತ್ಯಾಕಾಂಡದಿಂದಾಗಿ ನ್ಯೂಜಿಲೆಂಡ್ ಮಾತ್ರ ಜರ್ಝರಿತವಾಗಿದೆ.

ತನ್ನ ಹೆಲ್ಮೆಟ್ಟಿಗೆ ಕ್ಯಾಮೆರಾ ಅಳವಡಿಸಿಕೊಂಡಿದ್ದ ಉಗ್ರ ಮಸೀದಿಯ ಬಾಗಿಲಿನಿಂದಲೇ ಗುಂಡಿನ ಮೊರೆತ ಆರಂಭಿಸಿದ್ದಾನೆ. ಕೋಣೆ ಕೋಣೆ ಹೊಕ್ಕು ಗುಂಡಿನ ಸುರಿಮಳೆಗೈದಿದ್ದಾನೆ. ಆತನ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಮಾತ್ರವಲ್ಲ ಮಲಗಿದವರನ್ನು ಕೂಡ ಬಿಡದೆ ಬೆನ್ನತ್ತಿ ಕೊಂದು ಹಾಕಿದ್ದಾನೆ. ಗಾಯಗೊಂಡು ತೆವಳುತ್ತಿದ್ದವರನ್ನು ಬಿಡದೆ ರಕ್ತದೋಕುಳಿಯಾಡಿದ್ದಾನೆ ಆಸ್ಟ್ರೇಲಿಯಾದ ಉಗ್ರ. 28 ವರ್ಷದ ಬಿಳಿ ಉಗ್ರನನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆಯಾದರೂ, ಈ ಘಟನೆಗೂ ಅವರ ಪಾತ್ರಕ್ಕೂ ಇನ್ನೂ ಕೊಂಡಿ ಸಿಕ್ಕಿಲ್ಲ.

ಮೊದಲು ಅಲ್ ನೂರ್ ಮಸೀದಿಯ ಮೇಲೆ ದಾಳಿ ಮಾಡಲಾಗಿದೆ. ಅಲ್ಲಿ ಶುಕ್ರವಾರದ ಪ್ರಾರ್ಥನೆಗೆ ಬಂದಿದ್ದವರಲ್ಲಿ 41 ಜನರು ಹತರಾಗಿದ್ದಾರೆ. ಮತ್ತೊಂದು ಲಿನ್ ವುಡ್ ನ ಹೊರವಲಯದಲ್ಲಿರುವ ಸಣ್ಣ ಮಸೀದಿಯಲ್ಲಿ 7 ಜನರು ಹತ್ಯೆಗೀಡಾಗಿದ್ದಾರೆ. ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದುರಾದೃಷ್ಟಕರ ಸಂಗತಿಯೆಂದರೆ, ಹತ್ಯಾಗೀಡಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ. ಸತ್ತವರಷ್ಟೇ ಜನ ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ

Leave a Reply

Your email address will not be published.

Social Media Auto Publish Powered By : XYZScripts.com