ತುಮಕೂರು ಕ್ಷೇತ್ರ ಬಿಟ್ಟುಕೊಡಲು ದೇವೇಗೌಡರಿಗೆ ಮನವಿ : ಸಿಎಂ ಭೇಟಿ ಮಾಡಿದ ಡಿಸಿಎಂ ಪರಮೇಶ್ವರ್

ತುಮಕೂರು ಕ್ಷೇತ್ರ ಬಿಟ್ಟುಕೊಡಲು ದೇವೇಗೌಡರಿಗೆ ಮನವಿ ಮಾಡಲು ಡಿಸಿಎಂ ಪರಮೇಶ್ವರ್ ಅವರು  ಸಿಎಂ ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಗೆ ಒತ್ತಡ ಹಾಕಲಾಗುತ್ತಿದೆ ಎನ್ನಲಾಗುತ್ತದೆ. ಹೈಕಮಾಂಡ ಮಟ್ಟದಲ್ಲಿ ಸುದ್ದಿ ತಿಳಿಸಿ ಅಲ್ಲಿಂದ ದೇವೇಗೌಡರಿಗೆ ವಿಷಯ ತಿಳಿಸಲು ಡಿಸಿಎಂ ಪರಮೇಶ್ವರ್ ಒತ್ತಾಯ ಮಾಡುತ್ತಿದ್ದಾರೆ. ತುಮಕೂರು ವಾಪಸ್ಸು ಪಡೆಯಲು ಡಿಸಿಎಂ ಪರಮೇಶ್ವರ್ ಹರಸಾಹಸ ಪಡುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ 20 ಹಾಗೂ ಜೆಡಿಎಸ್ 8 ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡಿವೆ.

ಕಾಂಗ್ರೆಸ್ ಸಂಸದ ಪ್ರತಿನಿಧಿಸುತ್ತಿರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದ್ದು, ಪಕ್ಷದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಜೆಡಿಎಸ್ ನಲ್ಲಿ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಸ್ಪರ್ಧಿಸುವಂತೆ ಒತ್ತಡ ಹೇರಲಾಗಿದೆ. ಅವರು ಸ್ಪರ್ಧಿಸದಿದ್ದರೆ, ಮಾಜಿ ಶಾಸಕ ಸುರೇಶ್ ಬಾಬು, ಎಂ.ಟಿ. ಕೃಷ್ಣಪ್ಪ., ಹಾಗೂ ರಮೇಶ್ ಬಾಬು ಅವರು ರೇಸ್ ನಲ್ಲಿದ್ದಾರೆ.

ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಹೆಚ್.ಡಿ. ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ತುಮಕೂರು ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕೆಂದು ಜೆಡಿಎಸ್ ನಲ್ಲಿ ಚರ್ಚೆ ನಡೆದಿರುವಾಗಲೇ ಮತ್ತೊಂದು ಬೆಳವಣಿಗೆ ನಡೆದಿದೆ.

ರಾತ್ರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೇವೇಗೌಡರನ್ನು ಭೇಟಿ ಮಾಡಿದ್ದು, ತುಮಕೂರು ಕ್ಷೇತ್ರದ ವಿಚಾರದ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಜೆಡಿಎಸ್ ಈ ಕ್ಷೇತ್ರವನ್ನು ವಾಪಸ್ ಕಾಂಗ್ರೆಸ್ ಗೆ ಬಿಟ್ಟು ಕೊಡುವ ಬಗ್ಗೆಯೂ ಚರ್ಚೆ ನಡೆದಿದೆ.

ಹಾಲಿ ಕಾಂಗ್ರೆಸ್ ಸಂಸದರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವುದರಿಂದ ಕಾಂಗ್ರೆಸ್ ನಲ್ಲಿ ಅಸಮಾಧಾನ ಉಂಟಾಗಿದ್ದು, ಜೆಡಿಎಸ್ ನಲ್ಲಿಯೂ ಅಭ್ಯರ್ಥಿ ಬಗ್ಗೆ ಗೊಂದಲವಿದೆ. ಈ ಬೆಳವಣಿಗೆಗಳಿಂದ ಬಿಜೆಪಿ ಗೆ ಅನುಕೂಲವಾಗಬಹುದೆಂಬ ಕಾರಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com