ಹೊಸ ಅಲೆ ಎಬ್ಬಿಸಿದ ಮಂಡ್ಯ ರಾಜಕೀಯ : ಸುಮಲತಾ- ಎಸ್.ಎಂ.ಕೃಷ್ಣ ಭೇಟಿ

ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಅಲೆ ಎಬ್ಬಿಸಿರುವ ಸುಮಲತಾ ಅವರು ಇಂದು ಬಿಜೆಪಿಯ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಿಎಂ ಆಗಿ ಈಗ ಬಿಜೆಪಿ ಮುಖಂಡರಾಗಿರುವ ಎಸ್.ಎಂ.ಕೃಷ್ಣ ಅವರನ್ನು ಇತ್ತೀಚೆಗಷ್ಟೆ ಬಿಜೆಪಿಯ ಮುಖಂಡರ ಅಶೋಕ್ ಭೇಟಿಯಾಗಿ ಮಂಡ್ಯ ರಾಜಕೀಯದ ಬಗ್ಗೆ ಮಾತುಕತೆ ಮಾಡಿದ್ದರು. ಭೇಟಿಯ ನಂತರ ಸುಮಲತಾ ಸ್ಪರ್ಧೆಯ ಬಗ್ಗೆ ಬಿಜೆಪಿಯು ಚರ್ಚೆ ಮಾಡುತ್ತಿದೆ ಎಂದು ಹೇಳಿದ್ದರು.

ಈ ಬೆಳವಣಿಗೆ ನಡುವೆ ಸುಮಲತಾ ಅವರು ಕೃಷ್ಣ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಬಿಜೆಪಿಯು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದೆಯೇ ಎಂಬ ಕುತೂಹಲ ಗರಿಗೆದರಿದೆ. ಇಬ್ಬರೂ ಮುಖಂಡರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಭೇಟಿ ಬಳಿಕ ಇಬ್ಬರೂ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಸುಮಲತಾ ಅಂಬರೀಶ್ ಮಾತನಾಡಿ, ಎಸ್.ಎಂ.ಕೃಷ್ಣ ಅವರ ಆಶೀರ್ವಾದವನ್ನು ಪಡೆಯಲು ಬಂದಿದ್ದೆ, ನನಗೆ ಅವರ ಬೆಂಬಲವನ್ನು ಕೋರಿದ್ದೇನೆ ಎಂದಷ್ಟೆ ಹೇಳಿದರು.ಎಸ್.ಎಂ.ಕೃಷ್ಣ ಅವರು ಮಾತನಾಡಿ, ಸುಮಲತಾ ಅವರಿಗೆ ಬೆಂಬಲ ನೀಡುವ ಬಗ್ಗೆ ಬಿಜೆಪಿಯ ವರಿಷ್ಠರ ಬಳಿ ಮಾತನಾಡುತ್ತೇನೆ.
ಕಳೆದ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಡಾ.ಸಿದ್ದರಾಮಯ್ಯ ಅವರು 2.5ಲಕ್ಷ ಮತಗಳಿಸಿ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇದೆ ಎಂದು ತೋರಿಸಿದ್ದಾರೆ. ಹಾಗಾಗಿ ನಮ್ಮ ಬೆಂಬಲ ಮುಖ್ಯವೇ ಆಗುತ್ತದೆ ಎಂದರು. ನಾವು 18 ನೇ ತಾರೀಖು ನಮ್ಮ ನಿಲುವು ತಿಳಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಸೀಟು ನಿರಾಕರಣೆ ಬಗ್ಗೆ ಹೆಚ್ಚೇನೂ ಮಾತನಾಡಲು ಸುಮಲತಾ ಅವರು ಒಪ್ಪಲಿಲ್ಲ. ಆದರೆ ಬಿಜೆಪಿಯು ಬೆಂಬಲ ಘೋಷಿಸುತ್ತಿರುವ ಬಗ್ಗೆ ಅಧಿಕೃತವಾಗಿ ಯಾರೂ ತಮಗೆ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರನ್ನು ಭೇಟಿ ಆಗುತ್ತೀರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅವರು, ಚುನಾವಣೆ ಪ್ರಚಾರ ಸಮಯದಲ್ಲಿ ಎಲ್ಲ ಮುಖ್ಯ ನಾಯಕರನ್ನೂ ಭೇಟಿಯಾಗಿ ಬೆಂಬಲ ಕೇಳುವ ಆಶಯ ಹೊಂದಿದ್ದೇನೆ. ಈ ಮಂಡ್ಯದ ಚುನಾವಣೆ ಮಾದರಿ ಚುನಾವಣೆ ಆಗಲಿ ಎಂಬ ಉದ್ದೇಶವಿದೆ ಎಂದು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com