ಮುಂದುವರಿದ ಬಿಎಸ್‌ಎನ್‌ಎಲ್ ಬಿಕ್ಕಟ್ಟು, 1.68 ಲಕ್ಷ ಉದ್ಯೋಗಿಗಳಿಗೆ ವೇತನವಿಲ್ಲ

18 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಪೂರ್ಣಾವಧಿ ಬಿಎಸ್‌ಎನ್ಎಲ್ ಉದ್ಯೋಗಿಗಳು ಇನ್ನೂ ಫೆಬ್ರವರಿ ತಿಂಗಳ ವೇತನ ಪಡೆದಿಲ್ಲ. ಕಳೆದ ತಿಂಗಳು 28ರಂದೇ ಇದನ್ನು ಪಡೆಯಬೇಕಿತ್ತು. ಇನ್ನೊಂದೆಡೆ, ಬಿಎಸ್ಸೆನ್ನೆಲ್‌ನ ಗುತ್ತಿಗೆ ನೌಕರರು ಇದಕ್ಕಿಂತಲೂ ಹೀನಾಯ ಸ್ಥಿತಿಯಲ್ಲಿದ್ದಾರೆ. ಕೆಲವು ವೃತ್ತಗಳಲ್ಲಿನ ನೌಕರರು ಕಳೆದ ಮೂರು ತಿಂಗಳಿಂದ ವೇತನವನ್ನೇ ಪಡೆದಿಲ್ಲ. ಇನ್ನು ಕೆಲವೆಡೆ ಕಳೆದ ಆರು ತಿಂಗಳಿಂದ ವೇತನದ ಮುಖ ನೋಡಿಲ್ಲ.
ಉದ್ಯೋಗಿಗಳ ಒಕ್ಕೂಟ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅವರಿಗೆ ಲಿಖಿತ ದೂರು ನೀಡಿದ್ದು, ತಮ್ಮ ವೇತನಕ್ಕಾಗಿ ಕಂಪನಿಗೆ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಿದೆ. ನೌಕರರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.
ಫೈನಾನ್ಶಿಯಲ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ಇದೀಗ ಕೇರಳ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಮತ್ತು ಕಾರ್ಪೊರೇಟ್ ಕಚೇರಿಯಲ್ಲಿ ವೇತನ ಪಾವತಿಸಲು ಕಂಪನಿ ಆರಂಭಿಸಿದೆ. ಆದಾಯ ಸೃಷ್ಟಿಯಾದಂತೆ ಸಿಬ್ಬಂದಿಗೆ ವೇತನಗಳನ್ನು ಪಾವತಿಸಲಾಗುತ್ತದೆ. ಸರ್ಕಾರ ಯಾವುದೇ ಹಣಕಾಸು ನೆರವು ನೀಡದ ಕಾರಣ ವೇತನಗಳು ವಿಳಂಬವಾಗುತ್ತಿವೆ ಎಂದು ಬಿಎಸ್ಸೆನ್ನೆಲ್ ಅಧಿಕಾರಿಗಳು ಹೇಳಿದ್ದಾರೆ.
ದೂರಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ, ಬಂಡವಾಳ ವೆಚ್ಚಕ್ಕಾಗಿ ಮಾತ್ರ ಸಾಲ ಮಾಡಲು ಅವಕಾಶವಿದೆ. ಬಿಎಸ್‌ಎನ್ಎಲ್ 13,900 ಕೋಟಿ ರೂ. ಸಾಲದಲ್ಲಿದ್ದರೆ, ಏರ್‌ಟೆಲ್ 1.13 ಲಕ್ಷ ಕೋಟಿ ರೂ. ಸಾಲದಲ್ಲಿದೆ ಹಾಗೂ ವೊಡಾಫೋನ್ 1.2 ಲಕ್ಷ ಕೋಟಿ ರೂ. ಸಾಲದಲ್ಲಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com