ಸೂಪರ್ ಲೀಗ್ ಹಂತದ ಟೂರ್ನಿಯಲ್ಲಿ ಕರ್ನಾಟಕ ದಾಖಲಿಸಿದ ಎರಡನೇ ಗೆಲುವು

ಸಂಘಟಿತ ಆಟದ ಪ್ರದರ್ಶನ ನೀಡಿದ ಮನೀಷ್ ಪಾಂಡೆ ಬಳಗ ಇಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ 10 ರನ್ ಗಳಿಂದ ಉತ್ತರ ಪ್ರದೇಶ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 149 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಉತ್ತರ ಪ್ರದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 139 ರನ್ ಸೇರಿಸಿ ಸೋಲು ಕಂಡಿತು. ಸೂಪರ್ ಲೀಗ್ ಹಂತದ ಟೂರ್ನಿಯಲ್ಲಿ ಕರ್ನಾಟಕ ದಾಖಲಿಸಿದ ಎರಡನೇ ಗೆಲುವು ಇದಾಗಿದೆ.

ಗುರಿ ಬೆನ್ನಟ್ಟಿದ ಉತ್ತರ ಪ್ರದೇಶ ತಂಡದ ಆರಂಭ ಸಾಧಾರಣವಾಗಿತ್ತು. ಸಮರ್ಥ್ ಸಿಂಗ್ 15 ರನ್ ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್ ಗೆ ಆಕಾಶ್ ದೀಪ್ ನಾಥ್ (46) ಹಾಗೂ ಉಪೇಂದ್ರ ಯಾದವ್ (42) ತಂಡಕ್ಕೆ 60 ರನ್ ಕಾಣಿಕೆ ನೀಡಿದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್ ಮನ್ ನೆಲಕಚ್ಚಿ ನಿಲ್ಲಲಿಲ್ಲ. ಕರ್ನಾಟಕದ ಪರ ವಿ.ಕೌಶಿಕ್ 3, ಜೆ.ಸುಚಿತ್ 2 ವಿಕೆಟ್ ಉರುಳಿಸಿದರು.

ಕರ್ನಾಟಕದ ಪರ ಇನ್ನಿಂಗ್ಸ್ ಆರಂಭಿಸಿದ ಬಿ.ಆರ್.ಶರತ್ ತಂಡಕ್ಕೆ ಆಸರೆ ಆಗಲಿಲ್ಲ. ಎರಡನೇ ವಿಕೆಟ್ ಗೆ ಮಾಯಾಂಕ್ ಅಗರ್ ವಾಲ್ ಹಾಗೂ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹನ್ ತಂಡಕ್ಕೆ 60 ರನ್ ಕಾಣಿಕೆ ನೀಡಿದರು. ರೋಹನ್ 35 ಹಾಗೂ ಮಾಯಾಂಕ್ 33 ರನ್‍ಗಳಿಗೆ ಆಟ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ (21), ಮನೀಷ್ ಪಾಂಡೆ (22), ಮನೋಜ್ ಭಂಡಾರೆ (25) ತಂಡದ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com