ಬುಧವಾರದ ಪಂದ್ಯದ ಮೇಲೆ ಎಲ್ಲರ ಚಿತ್ತ : ಭಾರತ /ಆಸ್ಟ್ರೇಲಿಯಾ ತಂಡಗಳು ಟೂರ್ನಿಯಲ್ಲಿ ಜಿದ್ದಾಜಿದ್ದಿ

ಐದು ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ತಲಾ ಎರಡೆರಡು ಪಂದ್ಯ ಗೆದ್ದಿದ್ದರಿಂದ, ಕೊನೆಯ ಪಂದ್ಯ ರೋಚಕತೆ ಹುಟ್ಟಿಸಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೂರ್ನಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನೀಡಿದ್ದು, ಬುಧವಾರದ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬ್ಲ್ಯೂ ಬಾಯ್ಸ್‌ ಗೆಲ್ಲುವ ನೆಚ್ಚಿನ ತಂಡ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ಯಾವ ತಂಡವನ್ನು ಕಡೆಗಣೆಸುವಂತಿಲ್ಲ. ನಾಲ್ಕನೇ ಏಕದಿನ ಪಂದ್ಯದಲ್ಲಿ ಸವಾಲಿನ ಮೊತ್ತ ಹಿಂಬಾಲಿಸಿ ಗೆದ್ದ ಆಸ್ಟ್ರೇಲಿಯಾ, ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಐದನೇ ಏಕದಿನ ಪಂದ್ಯ ಗೆದ್ದು ಟೀಮ್ ಇಂಡಿಯಾ ಸರಣಿ ಕೈ ವಶ ಮಾಡಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.

ಲಯಕ್ಕೆ ಮರಳಿರುವ ಸ್ಟಾರ್ಸ್

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕರು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು ಎಲ್ಲರ ಚಿತ್ತ ಕದ್ದಿದ್ದಾರೆ. ಸ್ಟಾರ್ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಗಿದ್ದಾರೆ. ರೋಹಿತ್ ಶರ್ಮಾ ಶತಕದ ಅಂಚಿನಲ್ಲಿ ಎಡವಿದರೆ, ಗಬ್ಬರ್ 17 ಇನ್ನಿಂಗ್ಸ್ ಬಳಿಕ ಮೂರಂಕಿ ಮುಟ್ಟಿದರು. ಹೀಗಾಗಿ ಈ ಆಟಗಾರರ ಮೇಲೆ ಭರವಸೆ ಮೂಡಿದೆ.

ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ತಂಡಕ್ಕೆ ಬಲ ತುಂಬ ಬಲ್ಲ ಆಟಗಾರರು. ತವರಿನ ಅಂಗಳದಲ್ಲಿ ಪಂದ್ಯ ನಡೆಯುವುದರಿಂದ ಚೇಸಿಂಗ್ ಸ್ಟಾರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಯುವ ವಿಕೆಟ್ ಕೀಪರ್ ರಿಷಭ್ ಪಂತ್ ತಾವಾಡಿ ಬೆಳೆದ ಅಂಗಳದಲ್ಲಿ ಹೇಗೆ ಆಡುತ್ತಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಆಲ್ ರೌಂಡರ್ ಗಳು ತಮ್ಮ ಘನತೆಗೆ ತಕ್ಕ ಆಟವಾಡಿದರೆ, ಗೆಲುವಿನ ಮಾಲೆಯನ್ನು ತೊಡಬಹುದು.

ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಬಹುವಾಗಿ ಕಾಡಿದ್ದು, ಬೌಲಿಂಗ್ ವಿಭಾಗ. ಬಲಿಷ್ಠ ಬೌಲಿಂಗ್ ಹೊಂದಿರುವ ವಿರಾಟ್ ಪಡೆಯ ಸ್ಟಾರ್ ಬೌಲರ್ ಗಳು ಮೊಹಾಲಿಯಲ್ಲಿ ರನ್ ನೀಡಿ ಕೈ ಸುಟ್ಟುಕೊಂಡಿದ್ದರು. ಇನ್ನು ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರಿತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಮ್ಮ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಬೇಕಿದೆ. ಸ್ಪಿನ್ ಜುಗಲ್ ಬಂದಿ ಯಜುವೇಂದ್ರ ಚಹಾಲ್ ಹಾಗೂ ಕುಲ್ ದೀಪ್ ಯಾದವ್ ಅವರ ಮೋಡಿಯ ಬೌಲಿಂಗ್ ಎದುರುನೋಡುತ್ತಿದೆ.

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರು ಲಯಕ್ಕೆ ಮರಳಿರುವುದು ತಂಡಕ್ಕೆ ಆನೆ ಬಲ ತಂದಿದೆ. ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜ ತಂಡಕ್ಕೆ ಉತ್ತಮ ಆರಂಭ ನೀಡಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ಶಾನ್ ಮಾರ್ಶ್, ಪೀಟರ್ ಹ್ಯಾಂಡ್ಸ್ ಕಾಂಬ್, ಗ್ಲೇನ್ ಮ್ಯಾಕ್ಸ್ ವೇಲ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬಲ್ಲರು. ಕಳೆದ ಪಂದ್ಯದ ಹೀರೊ ಆ್ಯಷ್ಟನ್ ಟರ್ನರ್ ಅವರ ಮೇಲೆ ಎಲ್ಲರು ಚಿತ್ತ ನೆಟ್ಟಿದ್ದಾರೆ.

ಪ್ರವಾಸಿ ತಂಡದ ಬೌಲಿಂಗ್ ವಿಭಾಗ ಬಲಿಷ್ಠ. ಪ್ಯಾಟ್ ಕಮಿನ್ಸ್ ಹಾಗೂ ಜಾಯ್ ರಿಚರ್ಡಸನ್ ಟೀಮ್ ಇಂಡಿಯಾ ಬ್ಯಾಟ್ಸ್ ಮನ್ಸ್ ಗೆ ಕಾಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ಆ್ಯಡಂ ಜಾಂಪಾ ವಿಕೆಟ್ ಬೇಟೆ ನಡೆಸಬಲ್ಲರು.

ಐದನೇ ಪಂದ್ಯದಲ್ಲಿ ಗೆಲುವು ಯಾರ ಪಾಲಾಗುತ್ತದೆ. ಟೀಮ್ ಇಂಡಿಯಾ ವಿಶ್ವಕಪ್ ಗೂ ಮುನ್ನ ಸರಣಿ ಗೆಲುವಿನ ಸಿಹಿ ಅನುಭವಿಸುತ್ತದಾ ಎಂಬ ಲೆಕ್ಕಾಚಾರಗಳು ಶುರುವಾಗಿದೆ.

ಸಂಭಾವ್ಯ ತಂಡ.

ಭಾರತ
ರೋಹಿತ್ ಶರ್ಮಾ,/ ಕೆ.ಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಎಂ.ಎಸ್ ಧೋನಿ, ಕೇದಾರ ಜಾದವ್, ವಿಜಯ್ ಶಂಕರ್, ರವೀಂದ್ರ ಜಡೇಜಾ/ ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.
ಆಸ್ಟ್ರೇಲಿಯಾ:
ಅರೋನ್ ಫಿಂಚ್, ಉಸ್ಮಾನ್ ಖವಾಜ, ಮಾರ್ಕುಸ್ ಸ್ಟೋಯಿನಿಸ್, ಪೀಟರ್ ಹ್ಯಾಂಡ್ಸ್ಕೊಂಬ್, ಗ್ಲೇನ್ ಮ್ಯಾಕ್ಸ್ವೆಲ್, ಶಾನ್ ಮಾರ್ಷ್, ಅಲೆಕ್ಸ್ ಕ್ಯಾರಿ, ನಥಾನ್ ಕೌಲ್ಟರ್-ನೈಲ್, ಪ್ಯಾಟ್ ಕಮಿನ್ಸ್, ಆ್ಯಡಂ ಝಂಪಾ, ಜೇಸನ್ ಬೆಹ್ರೆನ್ಡ್ರಾಫ್
ಸಮಯ: ನಾಳೆ ಮಧ್ಯಾಹ್ನ 01:30

Leave a Reply

Your email address will not be published.

Social Media Auto Publish Powered By : XYZScripts.com