‘ನನ್ನ ಅಂಬಿ ಮಾಮನ ಕುಟುಂಬ ಬೇರೆಯಲ್ಲ : ಸುಮಲತಾ ಅಮ್ಮನ ಪರ ಪ್ರಚಾರ’ – ದರ್ಶನ್

ಲೋಕಸಭಾ ಚುನಾವಣಾ ಕ್ಷೇತ್ರಗಳಲ್ಲಿ ಮಂಡ್ಯ  ಕ್ಷೇತ್ರ ಭಾರಿ ಕುತೂಹಲ ಹುಟ್ಟಿಸಿದೆ. ಕಾರಣ ಮಂಡ್ಯದಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದರೆ, ಸುಮಲತಾ ಅಂಬರೀಷ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಸಿಎಂ ಮಗನ ಪರ ಜನ ಮತ ಹಾಕ್ತಾರಾ..? ಅಥವಾ ಮಂಡ್ಯದ ಗಂಡು ಅಂಬರೀಷ್ ಅವರ ಕುಟುಂಬದ ಪರ ನಿಲ್ತಾರಾ ಅನ್ನೋದು ಭಾರಿ ನಿರೀಕ್ಷೆಯಲ್ಲಿದೆ. ಆದರೆ ಮಂಡ್ಯದ ಗಂಡು ಅಂಬರೀಷ್ ಅವರಿಂದಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಬೆಳಿದೆ ದರ್ಶನ್ ಅವರು ಯಾರ ಪರ ಪ್ರಚಾರ ಮಾಡಲಿದ್ದಾರೆ ಅನ್ನೋದು ಮತ್ತೊಂದು ಕುತೂಹಲ.

ಜೊತೆಗೆ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆ ಎನ್ನುವುದು ಬಹಳ ಕುತೂಹಲ ಹುಟ್ಟುಹಾಕಿದೆ. ರಾಜಕೀಯ ಮಾತ್ರವಲ್ಲದೆ ಚಿತ್ರರಂಗದ ಕಣ್ಣು ಕೂಡ ಮಂಡ್ಯ ಕ್ಷೇತ್ರದ ಮೇಲೆ ಬಿದ್ದಿದೆ. ಅದಕ್ಕೆ ಕಾರಣ ಅಲ್ಲಿ ಸ್ಪರ್ಧೆಗೆ ಇಳಿಯುತ್ತಿರುವ ಅಭ್ಯರ್ಥಿಗಳು. ಒಂದು ಕಡೆ ನಟಿ ಸುಮಲತಾ ಅಂಬರೀಶ್ ಹಾಗೂ ಮತ್ತೊಂದು ಕಡೆ ನಟ ನಿಖಿಲ್ ಕುಮಾರ್ ಈ ಬಾರಿ ಮುಖಾಮುಖಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆನಾದರೂ, ಒಂದೇ ಕ್ಷೇತ್ರದಿಂದ ಸುಮಲತಾ ಹಾಗೂ ನಿಖಿಲ್ ಸ್ಪರ್ಧೆ ಮಾಡಿದರೆ, ಕನ್ನಡ ಚಿತ್ರರಂಗದ ಕಲಾವಿದರು ಯಾರ ಪರ ಪ್ರಚಾರ ಮಾಡುತ್ತಾರೆ ಎಂಬ ಪ್ರಶ್ನೆ ಇದೆ. ಇಬ್ಬರಿಗೂ ಆಪ್ತರಾಗಿರುವ ನಟ ದರ್ಶನ್, ಯಶ್, ಸುದೀಪ್ ಈ ಮೂವರಲ್ಲಿ ಯಾರು ಯಾರ ಪರ ಪ್ರಚಾರ ಮಾಡುತ್ತಾರೆ ಎನ್ನುವ ಗೊಂದಲ ಇತ್ತು.

ಹೀಗಿರುವಾಗ, ಈ ಬಗ್ಗೆ ನಟ ದರ್ಶನ್ ಮಾತನಾಡಿದ್ದಾರೆ. ತಾವು ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ.

ನಿನ್ನೆ ‘ಯಜಮಾನ’ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ಮಂಡ್ಯ ರಾಜಕೀಯ ವಿಚಾರವಾಗಿ ಉತ್ತರ ನೀಡಿದ ದರ್ಶನ್ ತಾವು ನಟಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿಗೆ ಡಿ ಬಾಸ್ ಬೆಂಬಲ ರೆಬಲ್ ಪತ್ನಿಗೆ ಸಿಕ್ಕಿದೆ.

”ಅಂಬರೀಶ್ ಅಪ್ಪಾಜಿಯವರು ಯಾವಾಗ ಚುನಾವಣೆಯಲ್ಲಿ ನಿಂತಿದ್ದರೊ ಆಗಲು ನಾನು ಹೋಗಿದ್ದೇನೆ. ಇದು ನಮ್ಮ ಕರ್ತವ್ಯ. ಸುಮಲತಾ ಅಮ್ಮ ಪ್ರಚಾರಕ್ಕೆ ಕರೆದರೆ ಹೋಗುತ್ತೇನೆ. ಎಷ್ಟೊ ಜನ ಸ್ನೇಹಿತರಿಗೂ ಚುನಾವಣೆಗಳಲ್ಲಿ ಪ್ರಚಾರ ಮಾಡಿ ಕೊಟ್ಟಿದ್ದೇನೆ. ಹಾಗೆಯೇ ಈಗಲೂ ಹೋಗಿ ಬರುತ್ತೇನೆ.” ಎಂದು ಹೇಳಿದ್ದಾರೆ ದರ್ಶನ್.

”ನಮ್ಮ ಕುಟುಂಬ ಬೇರೆ ಅಲ್ಲ. ಅಂಬಿ ಮಾಮ ಕುಟುಂಬ ಬೇರೆಯಲ್ಲ. ಸುಮಲತಾ ಅಮ್ಮ ತೆಗೆದುಕೊಳ್ಳುವ ಎಲ್ಲ ನಿರ್ಧಾರಕ್ಕೂ ನಾನು ಬದ್ಧನಾಗಿದ್ದೇನೆ. ನಾನು ಸುಮಲತಾ ಅಮ್ಮನ ಪರ ನಿಲ್ಲುತ್ತೇನೆ” ಎಂದು ಹೇಳುವ ಮೂಲಕ ದರ್ಶನ್ ತಮ್ಮ ನಿರ್ಧಾರವನ್ನು ದೃಢವಾಗಿ ಹೇಳಿದ್ದಾರೆ.

ಈ ಹಿಂದೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದ ದರ್ಶನ್ ಸುಮಲತಾ ಅವರಿಗೆ ಟಿಕೆಟ್ ಕೊಟ್ರೆ ಮಂಡ್ಯದಿಂದ ಅವರನ್ನ ಗೆಲ್ಲಿಸುವುದು ನನ್ನ ಕೆಲಸ ಎಂದು ಹೇಳಿದ್ದರಂತೆ. ಮಂಡ್ಯದಲ್ಲಿ ದರ್ಶನ್ ಬಳಗ ದೊಡ್ಡದಿದೆ. ಬಹುಶಃ ಇದು ಸುಮಲತಾ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು.

Leave a Reply

Your email address will not be published.

Social Media Auto Publish Powered By : XYZScripts.com