Air strike :ಜೀವ ಹಾನಿಯ ಲೆಕ್ಕ ಹಾಕೋದು ನಮ್ಮ ಕೆಲಸ ಅಲ್ಲ: ವಾಯು ಪಡೆ ಮುಖ್ಯಸ್ಥ ಧನೋವಾ

ಗಡಿ ದಾಟಿ ಪಾಕಿಸ್ತಾನದೊಳಕ್ಕೆ ನುಗ್ಗಿ ಬಾಲಾಕೋಟ್‌ನಲ್ಲಿರುವ ಉದ್ದೇಶಿತ ಗುರಿಗಳನ್ನು ನಾವು ವಾಯುದಾಳಿಯಲ್ಲಿ ಹೊಡೆದಿದ್ದೇವೆ ಎಂಬುದನ್ನು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಮತ್ತೊಮ್ಮೆ ಖಚಿತಪಡಿಸಿದ್ದಾರೆ. ಗುರಿಗಳನ್ನು ಹೊಡೆಯುವುದಷ್ಟೇ ನಮ್ಮ ಕೆಲಸವಾಗಿತ್ತು. ಆದರೆ ಜೀವ ಹಾನಿಯ ಲೆಕ್ಕ ಹಾಕೋದು ನಮ್ಮ ಕೆಲಸ ಅಲ್ಲ ಎಂದು ಅವರು ಹೇಳಿದ್ದಾರೆ.


ಜೀವಹಾನಿಯ ಸಂಖ್ಯೆಯ ಕುರಿತು ಸ್ಪಷ್ಟೀಕರಣ ನೀಡುವ ಸ್ಥಿತಿಯಲ್ಲಿ ವಾಯುಪಡೆಯಿಲ್ಲ. ಅದನ್ನು ಸರ್ಕಾರದ ಸ್ಪಷ್ಟಪಡಿಸಲಿದೆ. ನಾವು ಸತ್ತವರ ಸಂಖ್ಯೆಯನ್ನು ಲೆಕ್ಕ ಇಡುವುದಿಲ್ಲ. ಗುರಿಗಳನ್ನು ನಾಶ ಮಾಡಿದ್ದೇವೆಯೇ ಅಥವಾ ಇಲ್ಲವೋ ಎಂಬುದನ್ನಷ್ಟೇ ಗಮನಿಸುತ್ತೇವೆ ಎಂದು ಅವರು ಹೇಳಿದರು. ವಾಯುದಾಳಿಯ ಕುರಿತ ಪ್ರಶ್ನೆ, ಸಂಶಯಗಳ ಕುರಿತು ಪ್ರತಿಕ್ರಿಯಿಸಿದ ಧನೋವಾ, ನಾವು ವಾಯುದಾಳಿ ನಡೆಸಿಲ್ಲ ಎಂದಾದರೆ, ಪಾಕಿಸ್ತಾನ ಪ್ರತಿದಾಳಿ ಯಾಕೆ ನಡೆಸುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.


ಎಫ್-16ರ ವಿರುದ್ಧ ಮಿಗ್ 21 ಬೈಸನ್ ಬಳಕೆ ಮಾಡಿರುವುದರ ಕುರಿತ ಟೀಕೆಯನ್ನೂ ಅಲ್ಲಗಳೆದ ಧನೋವಾ, ಯೋಜಿತ ಕಾರ್ಯಾಚರಣೆಗೆ ನಮಗೆ ಯೋಜಿಸಬಹುದಾಗಿರುತ್ತದೆ, ಅದಕ್ಕೆ ಅನುಗುಣವಾಗಿ ವಿಮಾನಗಳನ್ನು ಆಯ್ಕೆ ಮಾಡಬಹುದು. ಅದೇ ರೀತಿಯೇ ಮಾಡಲಾಗಿತ್ತು. ಆದರೆ ಪ್ರತಿದಾಳಿ ನಡೆಯುವ ವೇಳೆ ಲಭ್ಯವಿರುವ ವಿಮಾನಗಳಲ್ಲಿ ತಿರುಗೇಟು ನೀಡುತ್ತೇವೆ, ಯಾವ ವಿಮಾನ ಎಂದು ನೋಡುವುದಿಲ್ಲ ಎಲ್ಲಾ ವಿಮಾನಗಳೂ ಶತ್ರುವಿನೊಂದಿಗೆ ಸೆಣಸಾಡುವ ಸಾಮರ್ಥ್ಯ ಹೊಂದಿವೆ ಎಂದು ಅವರು ಹೇಳಿದ್ದಾರೆ.
ಮಿಗ್-21 ಬೈಸನ್ ಸಮರ್ಥ ವಿಮಾನವಾಗಿದೆ. ಅದನ್ನು ಅಪ್‌ಗ್ರೇಡ್ ಮಾಡಲಾಗಿದ್ದು, ಅದು ಉತ್ತಮ ರಾಡಾರ್, ವಾಯುವಿನಿಂದ ವಾಯುವಿಗೆ ದಾಳಿ ಮಾಡುವ ಕ್ಷಿಪಣಿ ಹಾಗೂ ಉತ್ತಮ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಒಳಗೊಂಡಿದೆ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com