maha shivaratri : ಮಹಾಶಿವರಾತ್ರಿ ಪೂಜಾ ವಿಧಿ ವಿಧಾನಗಳು details ಇಲ್ಲಿವೆ…

ಭಾರತದ ಪವಿತ್ರ ಭೂಮಿಯಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಮಹಾಶಿವರಾತ್ರಿಯು ತನ್ನ ಶಕ್ತಿ ಸಾಮರ್ಥ್ಯದಲ್ಲಿ ಅಗ್ರಗಣ್ಯವಾಗಿದೆ. ಈ ರಾತ್ರಿಯಲ್ಲಿ ಉಂಟಾಗುವ ಗ್ರಹಗಳ ವಿಶಿಷ್ಟ ಸ್ಥಾನಗಳು, ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿಟ್ಟುಕೊಂಡು ಜಾಗರಣೆ ಮಾಡುವವರಿಗೆ ಅಸಾಧಾರಣವಾದ ಭೌತಿಕ ಮತ್ತು ಆಧ್ಯಾತ್ಮಿಕ ಲಾಭಗಳನ್ನು ದಯಪಾಲಿಸುತ್ತದೆ.

ಪ್ರತಿ ಚಾಂದ್ರಮಾನ ತಿಂಗಳಿನ ಹದಿನಾಲ್ಕನೇ ರಾತ್ರಿ ಅಥವಾ ಅಮಾವಾಸ್ಯೆಯ ಹಿಂದಿನ ರಾತ್ರಿಯನ್ನು ಶಿವರಾತ್ರಿಯೆಂದು ಕರೆಯಲಾಗುತ್ತದೆ. ಆಧ್ಯಾತ್ಮಿಕ ಪಥದಲ್ಲಿರವವರು, ಸಾಮಾನ್ಯವಾಗಿ ಈ ರಾತ್ರಿಯಂದು ವಿಶೇಷ ಮಹತ್ವವುಳ್ಳ ಸಾಧನೆಗಳನ್ನು ಮಾಡುತ್ತಾರೆ. ವರ್ಷದಲ್ಲಿರುವ ಹನ್ನೆರಡು ಶಿವರಾತ್ರಿಗಳಲ್ಲಿ, ಚಾಂದ್ರಮಾನ ಪಂಚಾಂಗದ ಮಾಘ ಮಾಸದಲ್ಲಿ ಬರುವ ಶಿವರಾತ್ರಿಯು ಅತ್ಯಂತ ಶಕ್ತಿಯುತವಾದ್ದರಿಂದ, ಅದನ್ನು ಮಹಾಶಿವರಾತ್ರಿಯೆನ್ನುತ್ತಾರೆ.

ಹಿಂದೂಗಳು ಹೆಚ್ಚಾಗಿ ಮಹಾಶಿವರಾತ್ರಿಯಂದು ಜಾಗರಣೆ ಕುಳಿತು ಶಿವ ಭಜನೆ ಮಾಡುವರು. ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಅಚರಿಸಲಾಗುವುದು.

ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.

ಮಹಾಶಿವರಾತ್ರಿ ದಿನ ಭಕ್ತರು ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವರು, ಹೊಸ ಬಟ್ಟೆ ಧರಿಸಿ, ಶಿವನ ಮಂದಿರಕ್ಕೆ ಭೇಟಿ ನೀಡುವರು.

• ಶಿವಲಿಂಗಕ್ಕೆ 3 ರಿಂದ 7 ಸುತ್ತು ಬರುವರು ಮತ್ತು ಇದರ ಬಳಿಕ ಲಿಂಗಕ್ಕೆ ನೀರು ಮತ್ತು ಹಾಲಿನ ಅಭಿಷೇಕ ಮಾಡಿ, ಬಳಿಕ ಬಿಲ್ವ ಪತ್ರೆಗಳು, ಹಣ್ಣುಗಳು, ಹೂವು ಅರ್ಪಿಸಿ. ಬಳಿಕ ಅಗರಬತ್ತಿ ಬಳಸಿಕೊಂಡು ಪೂಜೆ ಮಾಡಿ. ಸಂಪತ್ತನ್ನು ಕೇಳಲು ಅಗರಬತ್ತಿ ಹಚ್ಚಿಡಲಾಗುತ್ತದೆ.

• ಶಿವ ಲಿಂಗವನ್ನು ನೀರು, ಹಾಲಿನಿಂದ ಅಭಿಷೇಕ ಮಾಡಿದ ಬಳಿಕ ಬಿಲ್ವ ಪತ್ರೆ ಅರ್ಪಿಸುವುದು, ಆತ್ಮದ ಶುದ್ಧೀಕರಣಕ್ಕಾಗಿ.

• ಸ್ನಾನದ ಬಳಿಕ ವಿಭೂತಿ ಇಡುವುದು ಮೌಲ್ಯದ ಸಂಕೇತವಾಗಿದೆ.

• ಹಣ್ಣುಗಳನ್ನು ಅರ್ಪಣೆ ಮಾಡುವುದು ಆಕಾಂಕ್ಷೆ ಮತ್ತು ದೀರ್ಘಾಯುಷ್ಯದ ಪ್ರಾರ್ಥನೆಗಾಗಿ.

• ಬಿಲ್ವ ಪತ್ರೆ ಅರ್ಪಣೆ ಮಾಡುವುದು ಲೌಕಿಕ ಆಕಾಂಕ್ಷೆಗಳ ಸಂತೃಪ್ತಿಗಾಗಿ.

• ಹೆಚ್ಚಿನ ಭಕ್ತರು ಈ ದಿನ ಜಾಗರಣೆ ಮಾಡುವರು. ರಾತ್ರಿಯಿಡಿ ಶಿವ ಮಂದಿರಗಳಲ್ಲಿ ಓಂ ನಮಃ ಶಿವಾಯ ಮಂತ್ರಾಕ್ಷರಿಯನ್ನು ಪಠಿಸಲಾಗುತ್ತದೆ.

ಉಪವಾಸ

ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು.

ಮಹಾಶಿವರಾತ್ರಿ ಪೂಜೆಯನ್ನು ರಾತ್ರಿ ವೇಳೆ ಮಾಡಬೇಕು ಮತ್ತು ಮರುದಿನ ಬೆಳಗ್ಗೆ ಸ್ನಾನ ಮಾಡಿದ ಬಳಿಕ ವ್ರತವನ್ನು ಕೊನೆಗೊಳಿಸಬೇಕು. ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು. ಚತುದರ್ಶಿ ತಿಥಿಯು ಪೂರ್ಣಗೊಳ್ಳುವ ಮೊದಲು ವ್ರತ ಮುಗಿಸಿದರೆ ಅದರಿಂದ ಅತ್ಯಧಿಕ ಲಾಭವು ಸಿಗುವುದು.

ಮಹಾಶಿವರಾತ್ರಿಯಂದು ಶಿವ ಅಥವಾ ಶಿವಲಿಂಗನ ವಿಗ್ರಹವನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸುವುದು ಕುಟುಂಬಕ್ಕೆ ಉತ್ತಮ ಅದೃಷ್ಟವನ್ನು ಸೂಚಿಸುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com