2019ರ ಲೋಕಸಭಾ ಚುನಾವಣೆ : “ಜನ ಮರುಳೋ ಜಾತ್ರೆ ಮರುಳೋ……”

ವಿಶ್ವಾರಾಧ್ಯ ಸತ್ಯಂಪೇಟೆ |

ಹತಾಶಗೊಂಡಿರುವ ಸಂಘ ಪರಿವಾರ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮತ್ತೆ ಧರ್ಮದ ಹೆಸರಲ್ಲಿ ತನ್ನ ಕೊಳಕು ಚಟುವಟಿಕೆಗಳನ್ನು ಆರಂಭಿಸಿದೆ. ರಾಜ್ಯದಲ್ಲಿ ಇಷ್ಟಲಿಂಗ ಧಾರಣೆ ಹೆಸರಲ್ಲಿ ಬಿಜೆಪಿ ಮತ್ತು ಪಂಚ ಪೀಠಾಧಿಪತಿಗಳೆಂಬ ಪೀಡೆಗಳು ಈಗ ಕಾರ್ಯಾಚರಣೆಗೆ ಇಳಿದಿವೆ. ಬಸವತತ್ವದ ಪುಟ್ಟಾಪೂರಾ ವಿರೋಧಿಗಳಾದ ಈ ಜನ ಇವತ್ತು ಇಷ್ಟಲಿಂಗದ ಬಗ್ಗೆ ಮಾತನಾಡಲೂ ಆಯೋಗ್ಯರು. ಈ ಹುನ್ನಾರಗಳ ವಿರುದ್ಧ ಪ್ರಜಾಪ್ರಭುತ್ವವಾದಿಗಳೆಲ್ಲ ಈಗಲೇ ಧ್ವನಿ ಎತ್ತಬೇಕಿದೆ.

ರಾಜ್ಯದೆಲ್ಲೆಡೆ ಲಿಂಗಾಯತ ಧರ್ಮದ ಪ್ರಜ್ಞೆ ಮೊಳಗುತ್ತಿದೆ ಎಂದು ಸಾಮಾಜಿಕ ಕಳಕಳಿ ಉಳ್ಳ ಎಲ್ಲರೂ ಒಂದೆಡೆ ಬೀಗುತ್ತಿದ್ದರೆ ಇನ್ನೊಂದೆಡೆ ಅವರೆಲ್ಲರ ಗಮನಕ್ಕೆ ಬರದ ರೀತಿಯಲ್ಲಿ ಹಲವಾರು ಆಘಾತಕಾರಿ ಬೆಳವಣಿಗೆಗಳು ನಡೆದು ಹೋಗುತ್ತಿವೆ. ಇದೆ ತಿಂಗಳು 15 ರಿಂದ 19 ರವರೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟಿ ಎಂಬ ಗ್ರಾಮದಲ್ಲಿ
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನರ ಸಾಮೂಹಿಕ ಇಷ್ಟಲಿಂಗ ಪೂಜೆ ಎಂಬ ಹೆಸರಿನ ಧಗಲಬಾಜಿತನ ಯಾಗ ಎಗ್ಗಿಲ್ಲದೆ ನಡೆಯುತ್ತಿದೆ.

ಚೆಡ್ಡಿಬುದ್ಧಿಯ ಅಡವಿಸ್ವಾಮಿ

ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನ ಜಂಗಮರು ಎಂಬ ಪದ ಹನ್ನೆರಡನೆಯ ಶತಮಾನದಲ್ಲಿ ಬಳಕೆಯಾಗಿರುವಂತಹದ್ದು. ಅಂದು ಬಸವಣ್ಣನವರು ಕನಸಿದ ಸಮಾಜ ಕಟ್ಟಲು ಕಟಿಬದ್ಧರಾಗಿ ಲಕ್ಷದ ಮೇಲೆ ತೊಂಬತ್ತಾರು ಸಹಸ್ರ ಜನರನ್ನು ತರಬೇತಿ ನೀಡಿ ಸಿದ್ಧಗೊಳಿಸಿದ್ದರು. ಇವರೆಲ್ಲ ಭಿನ್ನ ಭಿನ್ನ ಜಾತಿ ಧರ್ಮಗಳಿಂದ ಎದ್ದು ಬಂದ ವಿವೇಕವಂತರಾಗಿದ್ದರು. ಇಷ್ಟಲಿಂಗ ಕುರುಹನ್ನು ಇಂಬಿಟ್ಟುಕೊಂಡು ಮಾಡಿದ ಕ್ರಾಂತಿ ಜಗತ್ತಿನ ಯಾವ ಪ್ರದೇಶದಲ್ಲೂ ಜರುಗಿಲ್ಲ. ಸ್ತ್ರೀ ಸಮಾನತೆ, ಮೇಲು ಕೀಳು, ಬಡವ-ಬಲ್ಲಿದ ಎಂಬ ಶಬ್ಧಗಳು ಬಸವಣ್ಣನವರ ಸಂದರ್ಭದಲ್ಲಿ ಅರ್ಥ ಕಳೆದುಕೊಂಡಿದ್ದವು. ಬಸವಣ್ಣನವರು ಪ್ರಧಾನಿಯಾಗಿದ್ದಾಗ ಅಲ್ಲಿನ ರಾಜ ಬಿಜ್ಜಳನನ್ನು ಭವಿಯೆಂದು ಕರೆದುದಲ್ಲದೆ ಆನೀ ಭವಿ ಬಿಜ್ಜಳಂಗೆ ಅಂಜುವೆನೆ ? ಎಂಬ ಸವಲನ್ನು ಹಾಕಿದ್ದರು. ಅಷ್ಟೇ ಅಲ್ಲ ಕಲ್ಯಾಣದಲ್ಲಿ ಅಂದು ಬಂದು ಸಮಾವೇಶಗೊಂಡಿದ್ದ ಯಾವ ಶರಣನು ತನ್ನ ಆತ್ಮಾಭಿಮಾನಬಿಟ್ಟು ಬದುಕಿರಲಿಲ್ಲ.

ಕಾಯದ ದಾಸೋಹ ತತ್ವಗಳ ಹಿನ್ನೆಲೆಯಲ್ಲಿ ರೂಪಗೊಂಡ ಚಳುವಳಿ ಇಷ್ಟಲಿಂಗವನ್ನು ತನ್ನ ಮೇಟಿಯಾಗಿ ಇಟ್ಟುಕೊಂಡು ನಡೆಸಿದ ಕ್ರಾಂತಿ ಅತ್ಯದ್ಭುತ. ದುರಂತವೆಂದರೆ ಆ ಚಳುವಳಿಯ ಎಲ್ಲಾ ಚರ ಜಂಗಮರನ್ನು ಹಾಗೂ ಆ ತತ್ವಗಳನ್ನು ಅವರ ಕಣ್ಣೆದುರಿಗೆ ಹಾಳು ಮಾಡಲು ಪಟ್ಟಭದ್ರ ಶಕ್ತಿಗಳು, ಮೂಲಭೂತವಾದಿಗಳು ಇನ್ನಿಲ್ಲದ ಪರಿಶ್ರಮ ಪಟ್ಟರು. ಸಹಸ್ರಾರು ಜನ ಶರಣರ ಬರ್ಬರ ಹತ್ಯೆಗಳಾದವು. ತತ್ವಗಳಿಗಾಗಿ ಹರಳಯ್ಯ- ಮಧುವಯ್ಯಗಳ ಎಳೆಹೂಟಿ ಶಿಕ್ಷೆ ಎಲ್ಲರ ಕಣ್ಣೆದುರಿಗೆ ಜರುಗಿ ಹೋಯ್ತು.

ಜನದ್ರೋಹಿ, ಧರ್ಮದ್ರೋಹಿ ಮೋದಿ

ಚಾರಿತ್ರ್ಯಿಕ ಸತ್ಯಗಳನ್ನು ಮರೆ ಮಾಚುತ್ತ ಬಂದ ಟೊಳ್ಳು ಇತಿಹಾಸ ಖೋರರು ಮುದ್ದಾಂ ಆಗಿ ಇಂಥ ಕಳವಳಕಾರಿಯಾದ ಸಂಗತಿಗಳನ್ನು ಬೇಕಂತಲೆ ಮರೆ ಮಾಚಿದರು. ಸಕಲ ಜೀವರಾಶಿಗೆ ಒಳಿತಾಗಬಲ್ಲ ತತ್ವವನ್ನು ಹೀಚುಹೀಚುಕಿ ಸಾಯಿಸಿದರು. ತದ ನಂತರ ಬಂದ ಆಂದ್ರದ ಆರಾಧ್ಯ ಜಂಗಮರು ಲಿಂಗಾಯತ ಧರ್ಮದ ತತ್ವಗಳನ್ನು ಇಂಚು ಇಂಚಾಗಿ ಹಾಳು ಮಾಡುತ್ತ ನಡೆದರು. ಅವರೆಲ್ಲರ ಪಳಿಯುಳಿಕೆಯೆ ಇಂದಿನ ಬಹುತೇಕ ಮಠಪೀಠ ಪರಂಪರೆಯ ಸ್ವಾಮೀಜಿಗಳು.

ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಕನಹಳ್ಳಿ ಗ್ರಾಮದ ಪಡಪೋಸಿಯೊಬ್ಬ 1994 ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟಿಯಲ್ಲಿ ಠಿಕಾಣಿ ಹೂಡಿದ. ತಲೆಯಲ್ಲಿ ಮಿದುಳು ಇಲ್ಲದವರ ವರ್ತಿಸುವ ಈ ವ್ಯಕ್ತಿಗೆ ಧಾರ್ಮಿಕವಾದ ಯಾವುದೆ ಆಚಾರ ವಿಚಾರ, ತತ್ವ ಸಿದ್ಧಾಂತದ ಎಳ್ಳಷ್ಟು ಪರಿಚಯವಿಲ್ಲ. ಅರೆಬರೆ ಬಟ್ಟೆಯಲ್ಲಿ ನಾಗಾಸಾಧುಗಳಂತೆ ಕಾಣುವ ಅರೆ ಹುಂಬನೊಬ್ಬನನ್ನು ಮುಂದು ಮಾಡಿ ಪುರೋಹಿತಶಾಹಿ ವ್ಯವಸ್ಥೆ ಅವನ ಮೂಲಕ ಮತ್ತೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನರ ಇಷ್ಟಲಿಂಗ ಪೂಜೆ ಎಂಬ ಪ್ರಹಸನವೊಂದನ್ನು ನಡೆಸಿದೆ.

ಅಡವಿಸ್ವಾಮಿಯ ಪಟಾಲಂ

ಹೇಗೂ ಜನತೆಯಲ್ಲಿ ಬಸವಾದಿ ಶರಣರ ಬಗೆಗೆ ಇನ್ನಿಲ್ಲದ ಪ್ರೀತಿ, ಮಮತೆ, ಗೌರವ ಎಲ್ಲವೂ ಇನ್ನೂ ಹಚ್ಚ ಹಸಿರಾಗಿ ಇವೆ. 770 ಅಮರ ಗಣಂಗಳು ಅಂದು ಮಾಡಿದ ಕ್ರಾಂತಿಯ ಬಗ್ಗೆ ದಂತಕತೆಗಳಿವೆ. ಜನತೆಯ ಮನಸ್ಸಿನಲ್ಲಿರುವ ಪ್ರೀತಿ ಮಮತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಲಿಂಗಾಯತ ಧರ್ಮದ ಹೈಜಾಕ ಮಾಡುವ ಕಂಪನಿಯವರಾದ ಪಂಚಪೀಠಾಧೀಶ್ವರರೆಲ್ಲ ಇದಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಶ್ರೀಶೈಲ, ಕಾಶಿಯ ಜಗದ್ಗುರುಗಳು , ಹೊಸಪೇಟೆಯ ಡಾ. ಸಂಗನಬಸವ ಸ್ವಾಮಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮಿ, ನಾಲವಾರದ ತೋಟೇಂದ್ರ ಸ್ವಾಮಿ ಮುಂತಾದವರೆಲ್ಲ ಅಲ್ಲಿ ಠಳಾಯಿಸಲಿದ್ದಾರೆ. ಮುಸುರೆಗೆ ನೋಣ ಮುತ್ತಿಕೊಂಡಿಪ್ಪಂತೆ. ಕಸುವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ ಬಹುಭಾಷಾ ಪಂಡಿತರು ಇಲ್ಲಿ ನೆರೆಯಲಿದ್ದಾರೆ. ಈ ಸಂದರ್ಭದಲ್ಲಿ ನನಗೆ ಅಮ್ಮುಗೆ ರಾಯಮ್ಮನ ವಚನ ನೆನಪಾಗುತ್ತಿದೆ.

ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ ?
ಸೀಳ ನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಅಮುಗೇಶ್ವರಾ

ಜನ ಸಾಮಾನ್ಯರು ಎಲ್ಲಿಯಾದರೂ ನೆರೆಯುತ್ತಾರೆಂದರೆ ಸಾಕು ಅಲ್ಲಿ ರಾಜಕಾರಣಿಗಳು ಹದ್ದುಗಳಂತೆ ಬಂದು ಎರಗುತ್ತಾರೆ. ತಮ್ಮ ಬೇಳೆ ಬೇಯಿಸಿಕೊಂಡು ಜನ ಸಾಮಾನ್ಯರಲ್ಲಿ ದೊಡ್ಡ ಧಾರ್ಮಿಕ ನಾಯಕರು ಎಂದು ಫೋಜ್ ಕೊಡುತ್ತಾರೆ. ಜನರ ಧಾರ್ಮಿಕ ನಂಬಿಕೆಗಳ ಮೇಲೆ ಸವಾರಿ ಮಾಡಿ ಎಲ್ಲರನ್ನೂ ದಿಶಾಬೂಲ್ ಗೊಳಿಸುತ್ತಾರೆ. ಹೀಗಾಗಿಯೆ ನಮ್ಮ ದೇಶದ ಪ್ರಧಾನಿ ಊರ್ಫ ಚೌಕಿದಾರ ಶ್ರೀ. ಸನ್ಮಾನ್ಯ ನರೇಂದ್ರ ಮೋದಿಯವರೂ ಸಹ ಇಲ್ಲಿ ತಮ್ಮ ದಿವ್ಯ ದರ್ಶನವನ್ನು ಜನತೆಗೆ ಮಾಡಿಸಲಿದ್ದಾರೆ. ಲಿಂಗಾಯತನಲ್ಲದ ಕರ್ಮಠ ಸಿದ್ಧಾಂತಿ ಯಡ್ಡಿಯ ಪರಿವಾರವೂ ಇಲ್ಲಿ ಜಮಾಗೊಳ್ಳಲಿದೆ. ಬಿ.ಜೆ.ಪಿ. ಪಾಳೆಯಕ್ಕೆ ಜಿಗಿದ ಮೊಟ್ಟ ಮೊದಲ ಧನದಾಹಿ ಶಿವಣ್ಣಗೌಡ ನಾಯಕರ ಮತಕ್ಷೇತ್ರದಲ್ಲಿಯೆ ಈ ವೀರಗೋಟಿ ಬರುತ್ತದೆ. ಹೀಗಾಗಿ ರಕ್ತಪಿಪಾಸುಗಳು, ಅರೆಬೆಂದ ಧಾರ್ಮಿಕ ಕಪಟ ವೇಷಧಾರಿಗಳು ಜನ ಸಾಮಾನ್ಯರನ್ನು ಮತ್ತದೆ ಶಿಲಾಯುಗಕ್ಕೆ ಕೊಂಡೊಯ್ಯುವ ಎತ್ತುಗಡೆ ಯಾವ ಎಗ್ಗಿಲ್ಲದೆ ನಡೆದಿವೆ. ಜನರೂ ಅಷ್ಟೇ : “ಜನ ಮರುಳೋ ಜಾತ್ರೆ ಮರುಳೋ…… ಮರುಳೋ ಸಿದ್ಧೇಶ್ವರ” ಎನ್ನುತ್ತಾ ಗುಂಪಿನಲ್ಲಿ ಗೋವಿಂದ ಎನ್ನುತ್ತಾ ಹೊರಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com