Valentine’s Day : ಅಪಘಾತದಿಂದ ಅರಳಿದ ಪ್ರೀತಿ.. ಇದು ಧಾರವಾಡದ ಅನ್ಮೋಲ್ ಪ್ರೇಮ್ ಕಹಾನಿ..

ಅಪಘಾತದಿಂದ ಅರಳಿದ ಪ್ರೀತಿ

ಪ್ರೀತಿ ಎಲ್ಲಿ ಯಾವಾಗ ಯಾರೊಂದಿಗೆ ಹುಟ್ಟುವುದು ಎಂಬುದು ಯಾರಿಗೂ ಗೊತ್ತಾಗುವುದದಿಲ್ಲ. ಪ್ರೀತಿಯ ಬಲೆಯಲ್ಲಿ ಬಿದ್ದವನಿಗೂ ಸಹ ನಾನೂ ಇದರಲ್ಲಿ ಬೀಳಲಿದ್ದೇನೆ ಎಂಬ ಅಂದಾಜು ಇರುವುದಿಲ್ಲ. ಹಾಗಾಗಿಯೇ ‘ಪ್ರೀತಿ ಕುರುಡು’ ಎಂದು ಹೇಳಿದ್ದುಂಟು. ಮೊದಲ ನೋಟದಲ್ಲಿ ಪ್ರೇಮ ಪಾಶಕ್ಕೆ ಸಿಲುಕಿರುವವರಿಗೆ ಲೆಕ್ಕವಿಲ್ಲ. ಕೆಲವು ಪ್ರಕರಣಗಳಲ್ಲಿ ಸಹಾಯ ಮಾಡಲು ಹೋಗಿ, ತಾವೇ ಪ್ರೀತಿಗೆ ಬಿದ್ದವರಿದ್ದಾರೆ. ಆದರೆ ಪ್ರೇಮಿಗಳ ದಿನವಾದ ಇಂದು, ನಮ್ಮ ಧಾರವಾಡದ ಅನಮೋಲ್ ಪ್ರೇಮ್ ಕಹಾನಿಯೊಂದನ್ನು ನಿಮ್ಮೆದುರು ಹೇಳಬೇಕಿದೆ.

Image result for love story accident

ಅವನು ಧಾರವಾಡದ ಯುವಕ. ಕಾರು ಚಲಾಯಿಸಿಕೊಂಡು ಹೊರಟಾಗ ತಿರುವಿನಲ್ಲಿ ಎದುರಿನಿಂದ ಬಂದ ಹುಡುಗಿಯೊಬ್ಬಳ ಸ್ಕೂಟಿಗೆ ಗುದ್ದಿದ. ಆಕೆ ಪ್ರಜ್ಞಾಹೀನಳಾಗಿ ಬಿದ್ದು ಬಿಟ್ಟಳು. ಇಲ್ಲಿ ತಪ್ಪು ಯಾರದು ಎಂಬುದು ಮುಖ್ಯವಾಗಲಿಲ್ಲ. ಗಾಯಗೊಂಡ ಹುಡುಗಿಗೆ ಚಿಕಿತ್ಸೆ ಕೊಡಿಸುವುದು ಮೊದಲ ಕೆಲಸ ಎಂದುಕೊಂಡು ಆ ಯುವಕ ದೊಡ್ಡದೊಂದು ಆಸ್ಪತ್ರೆಗೆ ಅವಳನ್ನು ಅಡ್ಮಿಟ್ ಮಾಡಿದ. ಅವಳು ಯಾರು? ಎಲ್ಲಿ ಇರುತ್ತಾಳೆ? ಇದಾವುದೂ ಅವನಿಗೆ ಗೊತ್ತಿಲ್ಲ. ಆಕೆಗೆ ಪ್ರಜ್ಞೆ ಬರುವವರೆಗೂ ಆಸ್ಪತ್ರೆಯಲ್ಲಿ ಅವಳನ್ನು ಜೋಪಾನವಾಗಿ ನೋಡಿಕೊಂಡು ಕುಳಿತ, ತನ್ನ ಮಿತ್ರರಿಗೆ ಫೋನ್ ಮಾಡಿ ಕರೆಯಿಸಿಕೊಂಡು ನಡೆದ ಘಟನೆ ವಿವರಿಸಿದ.

Image result for love accident

ಆ ಯುವಕ ಧಾರವಾಡದ ಸಂತೋಷ ಹಿರೇಮಠ, ಕಾರಿಗೆ ಸ್ಕೂಟಿ ಡಿಕ್ಕಿ ಹೊಡೆಸಿ ಆಸ್ಪತ್ರೆ ಸೇರಿದ ಹುಡುಗಿ ಹುಬ್ಬಳ್ಳಿಯ (ಗುಜರಾತ್ ಮೂಲದ) ದೀಪ್ತಿ. ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿದ ಸಂತೋಷನಿಗೆ ಯುವತಿ ಥ್ಯಾಂಕ್ಸ್ ಹೇಳಿದಾಗ ಇಬ್ಬರ ಕಣ್ಣೂ ಕಲೆತವು. ಪ್ರೇಮಾಂಕುರವಾಗಿ, ಫೋನ್ ಮಾತುಕತೆಗೆ ನಾಂದಿಯನ್ನೂ ಹಾಡಿತು. ಬಿ.ಇ ಓದಿದ್ದ ಯುವಕ ಅಲ್ಲಿ ಇಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನದ ಚಕ್ರ ನಡೆಸುತ್ತಿದ್ದ; ಹುಡುಗಿಯ ಮನೆಯವರೋ ಶ್ರೀಮಂತರು. ಅವರಿಗೆ ಹುಡುಗ ಮೆಚ್ಚುಗೆಯಾಗಲಿಲ್ಲ. – ಆಗಲೇ ಸಂತೋಷ ದೊಡ್ಡ ನೌಕರಿ ಮಾಡಬೇಕು ಎಂದುಕೊಂಡು ಪರ ರಾಜ್ಯಗಳಿಗೆ ಪಯಣ ಬೆಳೆಸಿದ. ಹುಡುಗಿಯೊಂದಿಗೆ ಮಾತಿನ ಸಖ್ಯ ಮುಂದುವರಿದೇ ಇತ್ತು. ಕೋಲ್ಕತ್ತಾ, ಆಗ್ರಾದಲ್ಲಿ ಹಾಗೂ ದೂರದ ದುಬೈನಲ್ಲೂ ಎರಡು ವರ್ಷ ಕೆಲಸ ಮಾಡಿ ಮರಳಿ ಧಾರವಾಡಕ್ಕೆ ಬಂದ.

Related image

ಇದಕ್ಕೂ ಮೊದಲು ದೂರದಲ್ಲಿದ್ದರೂ ಹುಡುಗಿಯ ಜನ್ಮದಿನಕ್ಕೆ ಮಿತ್ರರಾದ ವಿನಯ್ ಮತ್ತು ವಿಜಯ್ ಅವರ ಕೈಯಲ್ಲಿ ಉತ್ತಮ ಉಡುಗೊರೆಯನ್ನು ಕೊಟ್ಟು ಕಳಿಸಿದ! – ಧಾರವಾಡಕ್ಕೆ ಬಂದ ಮೇಲೆ ತಂದೆ ಹಾಗೂ ಅಣ್ಣನ ಸಹಾಯದೊಂದಿಗೆ ಸ್ವತಃ ತಾನೇ ಬಿಲ್ಲಿಂಗ್ ಕಾಂಟ್ರಾಕ್ಟ್ ಮಾಡಿಕೊಂಡು ಉತ್ತಮ ಗಳಿಕೆ ಮಾಡಿಕೊಂಡ ಅದರೊಂದಿಗೆ ಪ್ರೀತಿಸಿದ ಹುಡುಗಿಯವರ ಮನೆಯವರ ಒಪ್ಪಿಗೆ ಪಡೆಯಲು ಮುಂದಾದ. ಇವರ ಪ್ರೀತಿ ಕಮರದಂತೆ ಹುಡುಗನಿಗೆ ಮಿತ್ರರು ಸಹಾಯ ಮಾಡಿದರೆ, ಹುಡುಗಿಗೆ ಅಜ್ಜಿ ಬೆಂಗಾವಲಾಗಿ ನಿಂತಳು. ಕಾಯುವುದರಲ್ಲಿ ಸುಖವಿದೆ ಎಂಬ ಮಾತು ನಿಜವಾಯಿತು. ಈ ಪ್ರೇಮಿಗಳ ಮದುವೆಯೂ ಆಯಿತು. ಎರಡು ಗಂಡು ಮಕ್ಕಳು ಅಜ್ಜ-ಅಜ್ಜಿ ಹಾಗೂ ತಂದೆ-ತಾಯಿಯ ಪ್ರೀತಿಯ ಆರೈಕೆಯಲ್ಲಿ ಬೆಳೆಯುತ್ತಿವೆ.

* ಆಸ್ತಿ-ಅಂತಸ್ತು, ಮೇಲು-ಕೀಳು, ಬಡವ-ಬಲ್ಲಿದ ಹೀಗೆ ನೂರಾರು ಸಮಸ್ಯೆಗಳು ಇದ್ದರೂ ಪ್ರೀತಿಸುವವರು ಗಟ್ಟಿಯಾಗಿದ್ದು, ಭಯಪಡದಂತೆ, ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳದೇ ತಾಳ್ಮೆಯಿಂದ, ಸಂದರ್ಭಕ್ಕೆ ತಕ್ಕಂತೆ ಆಲೋಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದರೆ ಅದಕ್ಕೆ ಫಲ ಇದ್ದೇ ಇರುತ್ತದೆ ಎಂಬುದಕ್ಕೆ ಈ ಪ್ರೇಮ ಕಥೆಯೇ ಸಾಕ್ಷಿ ಎನ್ನಬಹುದು. – ಆತಂಕ, ಅತಂತ್ರತೆಯ ದಿನಗಳಲ್ಲಿ ಸಹಾಯ ಮಾಡಿದ ಸ್ನೇಹಿತರನ್ನು ಆಗಾಗ ನೆನಪಿಸಿಕೊಳ್ಳುವ ಈ ದಂಪತಿ ಅವರನ್ನೆಲ್ಲ ತಂಪೊತ್ತಿನಲ್ಲಿ ನೆನೆಯಬೇಕು ಎನ್ನುತ್ತಾರೆ; ಇನ್ನೆರಡು ದಿನ ಕಳೆದರೆ ಎದುರಾಗುವ ಮದುವೆ ವಾರ್ಷಿಕೋತ್ಸವದ 11ನೇ ಸಂಭ್ರಮಾಚರಣೆಯ ಗಳಿಗೆಗೆ ಸಜ್ಜಾಗಿದ್ದಾರೆ!

ಪ್ರಸನ್ನ ಕುಮಾರ ಹಿರೇಮಠ

Leave a Reply

Your email address will not be published.

Social Media Auto Publish Powered By : XYZScripts.com