ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದ ಅತೃಪ್ತರ ನಡೆ ಮುಂಬೈನಲ್ಲೇ ನಿರ್ಧಾರ?

ಅದಾಗಲೇ ಪಕ್ಷದಿಂದ ಅನರ್ಹಗೊಳ್ಳುವ ಸೂಚನೆ ಪಡೆದಿರುವ ಅತೃಪ್ತ ಕಾಂಗ್ರೆಸ್ ಶಾಸಕರು ತಮ್ಮ ಮುಂದಿನ ನಡೆ ಕುರಿತು ಚರ್ಚೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಕಳೆದ ಶುಕ್ರವಾರ ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆ ಗೆ ಮುನ್ನ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜ ರಾಗದ ನಾಲ್ವರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‍ಗೆ ಕಾಂಗ್ರೆಸ್ ಮನವಿ ಮಾಡಲು ನಿರ್ಧರಿಸಿದೆ. ಇದ ರಿಂದ ತಮ್ಮ ಅನರ್ಹತೆ ಬಗ್ಗೆ ಸೂಚನೆ ಪಡೆದಿರುವ ಅತೃಪ್ತ ಕೈ ಶಾಸಕರು ಒಂದೆಡೆ ಸೇರಿ ಚರ್ಚೆ ಆರಂಭಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಅಜ್ಞಾತ ಸ್ಥಳದಲ್ಲಿ ಒಟ್ಟಾಗಿರುವ ನಾಲ್ವರು ಅತೃಪ್ತ ಶಾಸಕರು ಸಭೆ ಸೇರಿ ಚರ್ಚಿಸುತ್ತಿದ್ದಾರಂತೆ. ಶಾಸಕರಾದ ರಮೇಶ್ ಜಾರಕಿಹೊಳಿ, ಆರ್.ನಾಗೇಂದ್ರ, ಉಮೇಶ್ ಜಿ. ಜಾದವ್ ಹಾಗೂ ಮಹೇಶ್ ಕುಮಟಳ್ಳಿ ಚರ್ಚೆ ನಡೆಸಿದ್ದು, ಮುಂದಿನ ನಡೆ ಬಗ್ಗೆ ಗಂಭೀರ ಮಾತುಕತೆ ಮಾಡುತ್ತಿದ್ದಾರಂತೆ. ಮಾಹಿತಿ ಪ್ರಕಾರ ಈ ನಾಲ್ವರು ಶಾಸಕರು ಮತ್ತೆ ಮುಂಬೈನಲ್ಲಿ ಒಟ್ಟಿಗೆ ಸೇರಿ ಚರ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಇನ್ನೂ ದೂರು ಸ್ವೀಕರಿಸಿಲ್ಲ. ದೂರು ಸ್ವೀಕರಿಸಿದ ನಂತರ ಅವರು ಯಾವ ನಿರ್ಧಾರ ಕೈಗೊಳ್ಳಬಹುದು. ಒಂದೊಮ್ಮೆ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಂಡರೂ, ತಾವು ನಾಲ್ವರು ಮಾತ್ರ ಒಂದೇ ನಿರ್ಧಾರ ಕೈಗೊಳ್ಳಬೇಕು ಎಂದು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಅಮಾನತುಗೊಳ್ಳಬಹುದಾದ ಇಲ್ಲವೇ ಶಾಸಕತ್ವ ಅನರ್ಹ ಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಪೀಕರ್ ಕ್ರಮ ಕೈಗೊಳ್ಳುವ ಮುನ್ನವೇ ತಾವೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಬಜೆಟ್ ಅನುಮೋದನೆ, ವಿವಿಧ ಬಿಲ್‍ಗಳು ಈ ವಿಧಾನ ಮಂಡಳ ಅಧಿವೇಶನದಲ್ಲಿ ಪಾಸ್ ಆಗಬೇಕಿದೆ. ಹಣಕಾಸು ಬಿಲ್ ಪಾಸ್ ಆಗದೇ ಯಾವುದೇ ಕೆಲಸ ಆಗಲ್ಲ. ಇದರಿಂದ ಈ ಸಂದರ್ಭದಲ್ಲಿ ನಾಲ್ವರು ಕೈ ಶಾಸಕರ ಅಗತ್ಯ ಪಕ್ಷಕ್ಕೆ ಹೆಚ್ಚಾಗಿರಲಿದೆ. ಇದರಿಂದ ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಬಜೆಟ್‍ಗೆ ಅನುಮೋದನೆ ಸಿಕ್ಕ ನಂತರ ಕ್ರಮದ ಬಗ್ಗೆ ಯೋಚಿಸಬಹುದು, ಅಷ್ಟರಲ್ಲಾಗಲೇ ತಮ್ಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಅತೃಪ್ತರು ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com