ರಾಜ್ಯ ಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನ ಫೆ.14 – ಎಸ್.ವೈ.ಸೊರಕಿ

ರಾಜ್ಯ ಸರಕಾರಿ ಶಾಲಾ ಪದವೀಧರ ಶಿಕ್ಷಕರ ಸಂಘದ ವತಿಯಿಂದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕ ಪ್ರತಿನಿಧಿಗಳ ರಾಜ್ಯ ಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನವನ್ನು ಫೆ.14 ರಂದು ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ಶಿಕ್ಷಕರ ಸದನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್.ವೈ.ಸೊರಕಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘಟನೆ ಮೂಲಕ ಈ ಕಾರ್ಯಕ್ರಮದಲ್ಲಿ ಸರ್ಕಾರದ ಮುಂದೆ ಹಲವಾರು ಬೇಡಿಕೆಗಳನ್ನು ಇಡಲಾಗುವುದು. ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಾವಣೆ, ಹೊಸ ವೃಂದ ಬಲ ತಿದ್ದುಪಡಿ ಮಾಡುವ ಕುರಿತು, ಶಿಕ್ಷಕರ ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಕಾಲಕಾಲಕ್ಕೆ ಶಿಕ್ಷಕರಿಗೆ ಮುಂಬಡ್ತಿ ನೀಡುವುದು. ಮುಂಬಡ್ತಿ ಪ್ರಮಾಣವನ್ನು ಶೇ 25 ಯಿಂದ ಶೇ 75ಕ್ಕೆ ಹೆಚ್ಚಿಸಬೇಕು. ಬಡ್ತಿಗಾಗಿ ನಡೆಸಲಾಗುವ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಹೀಗೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಕೋರಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ದೇವಪ್ಪ ಶಾನವಾಡ, ಎಸ್.ಸಿ. ಶಾನವಾಡ, ಡಾ. ಸಿದ್ದಲಿಂಗೇಶ ಹಂಡಗಿ, ಮಹಾಂತೇಶ ಇತರರು ಗೋಷ್ಠಿಯಲ್ಲಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com