ರಫೇಲ್ ಯುದ್ಧ ವಿಮಾನ ಖರೀದಿ : ಸಮಾನಾಂತರ ಮಾತುಕತೆಗೆ ರಕ್ಷಣಾ ಸಚಿವಾಲಯ ಆಕ್ಷೇಪ

ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಕುರಿತು ಭಾರತ ಮತ್ತು ಫ್ರಾನ್ಸ್ ನಡುವೆ ಮಾತುಕತೆ ನಡೆಯುತ್ತಿರುವಾಗಲೇ, ಪ್ರಧಾನಿ ಕಚೇರಿ ಮತ್ತು ಫ್ರಾನ್ಸ್ ಅಧಿಕಾರಿಗಳ ಜೊತೆ ‘ಸಮಾನಾಂತರ ಮಾತುಕತೆ’ ನಡೆಯುತ್ತಿದ್ದ ಬಗ್ಗೆ ರಕ್ಷಣಾ ಸಚಿವಾಲಯ ಆಕ್ಷೇಪ ಮಾಡಿದೆ.

2015ರ ನವೆಂಬರ್ 24ರಂದು ಕೇಂದ್ರ ರಕ್ಷಣಾ ಸಚಿವಾಲಯ ಅಂದಿನ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಬರೆದಿದ್ದರೆನ್ನಲಾದ ಪತ್ರದಲ್ಲಿ, ಇಂಥ ಸಮಾನಾಂತರ ಮಾತುಕತೆಯಿಂದ ಯುದ್ಧ ವಿಮಾನ ಖರೀದಿಯ ಮಾತುಕತೆ ದುರ್ಬಲವಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು ಎಂದು ದಿ ಹಿಂದೂ ಪತ್ರಿಕೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ.

ರಕ್ಷಣಾ ಸಚಿವಾಲಯ ನಡೆಸುತ್ತಿರುವ ಮಾತುಕತೆಗೆ ಪ್ರಧಾನಿ ಕಚೇರಿ ನಡೆಸುತ್ತಿರುವ ಮಾತುಕತೆ ವ್ಯತಿರಿಕ್ತವಾಗಿದೆ ಎಂದು ಆಕ್ಷೇಪಿಸಿ ರಕ್ಷಣಾ ಸಚಿವಾಲಯ ಪ್ರತಿಭಟಿಸಿತ್ತು. ಭಾರತದ ಸಮಾಲೋಚನಾ ತಂಡದಲ್ಲಿ ಇರದವರು ಇಂಥ ಅನವಶ್ಯಕ ಮಾತುಕತೆಯನ್ನು ಕೈಬಿಡಬೇಕು ಎಂದು ರಕ್ಷಣಾ ಕಾರ್ಯದರ್ಶಿ ಜಿ ಮೋಹನ್ ಎಂಬುವವರು ಪತ್ರ ಬರೆದಿದ್ದರು.

ರಕ್ಷಣಾ ಸಹಾಯಕ ಕಾರ್ಯದರ್ಶಿ ಎಸ್ ಕೆ ಶರ್ಮಾ ಅವರು ಸಮಾನಾಂತರ ಮಾತುಕತೆಯನ್ನು ವಿರೋಧಿಸಿ ಬರೆದ ಪತ್ರಕ್ಕೆ ಜಂಟಿ ಕಾರ್ಯದರ್ಶಿ ಮತ್ತು ವಾಯುಸೇನೆಯ ಅಕ್ವಿಸಿಶನ್ ಮ್ಯಾನೇಜರ್ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ನಿರ್ದೇಶಕ (ಅಕ್ವಿಸಿಶನ್) ಅವರು ಅನುಮೋದಿಸಿ ಪತ್ರಕ್ಕೆ ಸಹಿ ಹಾಕಿದ್ದರು.

2018ರ ಅಕ್ಟೋಬರ್ ನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸರಕಾರ ನೀಡಿದ ಮಾಹಿತಿಯಲ್ಲಿ, ಡೆಪ್ಯುಟಿ ಚೀಫ್ ಏರ್ ಮಾರ್ಷಲ್ ಅವರ ನೇತೃತ್ವದಲ್ಲಿ 7 ಜನರ ತಂಡ ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಗ್ಗೆ ತಿಳಿಸಲಾಗಿತ್ತು. ಆದರೆ, ಅದರಲ್ಲಿ ಸಮಾನಾಂತರವಾಗಿ ನಡೆಸಲಾದ ಮಾತುಕತೆಯ ಬಗ್ಗೆ ಮಾಹಿತಿ ನೀಡಿಲಲಿಲ್ಲ ಎಂದೂ ದಿ ಹಿಂದೂ ತಿಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com