ಟಿ-20 ಪಂದ್ಯದಲ್ಲಿ ಭಾರತ ತಂಡವನ್ನು 80 ರನ್ ಗಳಿಂದ ಸೋಲಿಸಿದ ನ್ಯೂಜಿಲೆಂಡ್

ಏಕದಿನ ಸರಣಿಯ ಸೋಲಿನಿಂದ ಕಂಗೆಟ್ಟಿದ್ದ ನ್ಯೂಜಿಲೆಂಡ್ ತಂಡ ಬುಧವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡವನ್ನು 80 ರನ್ ಗಳಿಂದ ಸೋಲಿಸಿದ್ದು, ಕಿವೀಸ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ಹಿಂಬಾಲಿಸಿದ ಭಾರತ 19.2 ಓವರ್ ಗಳಲ್ಲಿ 139 ರನ್ ಗಳಿಗೆ ಸರ್ವಪತನ ಕಂಡಿತು.

220 ರನ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ರೋಹಿತ್ ಶರ್ಮಾ (1), ಶಿಖರ್ ಧವನ್ (29), ವಿಜಯ್ ಶಂಕರ್ (27), ರಿಷಭ್ ಪಂತ್ (4) ರನ್ ಕಲೆ ಹಾಕುವಲ್ಲಿ ಎಡವಿದರು.

ಮಧ್ಯಮ ಕ್ರಮಾಂಕದ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಸಹ ಬಂದಷ್ಟು ವೇಗದಲ್ಲಿ ಪೆವಿಲಿಯನ್ ಸೇರಿದರು. 77 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಹಾಗೂ ಕೃನಾಲ್ ಪಾಂಡ್ಯ ಆಸರೆಯಾದರು. ಈ ಜೋಡಿ ತಂಡಕ್ಕೆ ಜಯದ ಮಾಲೆಯನ್ನು ತೊಡಿಸದೆ ಇದ್ದರೂ, ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಜೋಡಿ 52 ರನ್ ಸೇರಿಸಿತು. ಉಳಿದಂತೆ ಕೆಳ ಕ್ರಮಾಂಕದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಪರಿಣಾಮ ಭಾರತ 19.2 ಓವರ್ ಗಳಲ್ಲಿ 139 ರನ್ ಗಳಿಗೆ ಆಲ್ ಔಟ್ ಆಯಿತು. ನ್ಯೂಜಿಲೆಂಡ್ ಪರ ಟೀಮ್ ಸೌಥಿ 3, ಲೋಕಿ ಫೆರ್ಗುಸನ್ ಹಾಗೂ ಮಿಚೆಲ್ ಸ್ಯಾಂಟನರ್ ತಲಾ ಎರಡು ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭಿಕ ಕಾಲಿನ್ ಮನ್ರೋ (34) ಹಾಗೂ ಟೀಮ್ ಸೀಫರ್ಟ್‍ ಮೊದಲ ವಿಕೆಟ್ ಗೆ 8.2 ಓವರ್ ಗಳಲ್ಲಿ 86 ರನ್ ಕಾಣಿಕೆ ನೀಡಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಆಟಗಾರ 43 ಎಸೆತಗಳಲ್ಲಿ 84 ರನ್ ಸಿಡಿಸಿ, ಖಲೀಲ್ ಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದ ಕೇನ್ ವಿಲಿಯಮ್ಸನ್ (34) ಸಮಯೋಚಿತ ಆಟ ಆಡಿದರು. ರಾಸ್ ಟೇಲರ್ 14 ಎಸೆತಗಳಲ್ಲಿ 23 ರನ್ ಬಾರಿಸಿ ಮೊತ್ತವನ್ನು ಹಿಗ್ಗಿಸಿದರು. ಸ್ಕಾಟ್ ಕುಗೆಲಿನ್ 7 ಎಸೆತಗಳಲ್ಲಿ 20 ರನ್ ಬಾರಿಸಿ ಆರ್ಭಟಿಸಿದರು. ಭಾರತದ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಹಾರ್ದಿಕ್ ಪಾಂಡ್ಯ ರನ್ ನೀಡಿ ಕೈ ಸುಟ್ಟುಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com