ಅಕ್ರಮ ಠೇವಣಿ ಯೋಜನೆಗಳ ನಿಷೇಧಿಸುವ ತಿದ್ದುಪಡಿಗೆ ಕೇಂದ್ರ ಸಂಪುಟ ಅನುಮೋದನೆ…

ಚಿಟ್ ಫಂಡ್‌ ಹಗರಣಗಳ ವಿವಾದ ಭುಗಿಲೆದ್ದಿರುವ ಮಧ್ಯೆಯೇ, ಅಕ್ರಮ ಠೇವಣಿ ಯೋಜನೆಗಳನ್ನು ನಿಷೇಧಿಸಲು ಸಾಧ್ಯವಾಗುವಂತೆ ಕಾನೂನು ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ತಿದ್ದುಪಡಿ ಮಸೂದೆಯಲ್ಲಿ ಸಣ್ಣ ಹೂಡಿಕೆದಾರರನ್ನು ರಕ್ಷಿಸುವ ನಿಟ್ಟಿನಲ್ಲಿ ವಂಚಕರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಪ್ರಸ್ತಾಪವಿದೆ.


ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಅಕ್ರಮ ಠೇವಣಿ ಯೋಜನೆಗಳ ನಿಷೇಧಿಸುವ ಮಸೂದೆ, 2108 ಅನ್ನು ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸಿನ ಅನ್ವಯ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ನೋಂದಣಿಯಿಲ್ಲದೆ ಅಂತಹ ಠೇವಣಿ ಯೋಜನೆಗಳನ್ನು ನಡೆಸುವ ಯಾವುದೇ ವ್ಯಕ್ತಿಯು ಈ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತಾನೆ. ಇಂತಹ ನೋಂದಣಿಯಾಗದ ಯೋಜನೆಗಳ ಜಾಹೀರಾತುಗಳು ಹಾಗೂ ಹಾಗೂ ಅವುಗಳ ಬ್ರಾಂಡ್ ಅಂಬಾಸಿಡರ್ ಕೂಡಾ ಈ ಕಾನೂನಿನ ವ್ಯಾಪ್ತಿಗೆ ಬರಲಿದ್ದಾರೆ ಎಂದರು.
“ಈ ಮಸೂದೆಯು ಅಕ್ರಮ ಠೇವಣಿ ಯೋಜನೆಗಳಿಗಾಗಿ ಠೇವಣಿ ಪಡೆಯುವವರ ಪ್ರಚಾರ, ಕಾರ್ಯಾಚರಣೆ, ಜಾಹೀರಾತು ನೀಡುವಿಕೆ ಅಥವಾ ಠೇವಣಿ ಸ್ವೀಕರಿಸುವುದನ್ನು ನಿಷೇಧಿಸುವ ಪ್ರಸ್ತಾಪ ಈ ಮಸೂದೆಯಲ್ಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ಭಾರೀ ದಂಡ ವಿಧಿಸಬಹುದಾಗಿದೆ” ಎಂದು ಪ್ರಸಾದ್ ಹೇಳಿದರು.


ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದ ಸಂಬಂಧ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಲ್ಲಿ ರಾಜಕೀಯ ಬಿರುಗಾಳಿ ಎದ್ದಿರುವ ಬೆನ್ನಲ್ಲೇ ಕಾನೂನು ತಿದ್ದುಪಡಿ ಮಾಡುವ ಈ ನಿರ್ಧಾರ ಹೊರಬಿದ್ದಿದೆ.
“ಕಳೆದ ನಾಲ್ಕು ವರ್ಷಗಳಲ್ಲಿ, 2015ರಿಂದ 2018ರ ನವೆಂಬರ್ 30ರ ತನಕ, ಸಿಬಿಐ ಬಹುಕೋಟಿ ಚಿಟ್ ಫಂಡ್ ಹಗರಣಗಳ 166 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಬಹುತೇಕ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲೇ ದಾಖಲಾಗಿವೆ. ಎರಡನೇ ಸ್ಥಾನದಲ್ಲಿ ಒಡಿಶಾ ಇದೆ. ಈ ಎಲ್ಲಾ ಪ್ರಕರಣಗಳು ಮೋದಿ ಸರ್ಕಾರ ಆಡಳಿತಕ್ಕೆ ಬರುವ ಮುನ್ನವೇ ನಡೆದಂಥವು” ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರು ತಮ್ಮ ಹಣವನ್ನು ಠೇವಣಿ ನಡೆಸಬಹುದಾದ ನೋಂದಾಯಿತ ಠೇವಣಿ ಯೋಜನೆಗಳ ಆನ್‌ಲೈನ್ ಡೇಟಾಬೇಸ್ ಅನ್ನು ನಿರ್ವಹಿಸುವ ಕುರಿತೂ ಇದೇ ವೇಳೆ ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com