ಬಿಜೆಪಿ ಸಂಗ, ಅಭಿಮಾನ ಭಂಗ – ಪಶ್ಚಾತಾಪ ಪಡ್ತೀರಿ, ಕೈ ಶಾಸಕರಿಗೆ DKS ಎಚ್ಚರಿಕೆ…

ಬಿಜೆಪಿ ನಂಬಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿರುವವರು ಮುಂದೆ ಪಶ್ಚಾತಾಪ ಪಡುತ್ತಾರೆ ಎಂದು ಜಲ ಸಂಪನ್ನೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿಯವರು ಏನೇ ಆಟ ಆಡಿದರೂ ಸಮ್ಮಿಶ್ರ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅವರೂ ಪಶ್ಚಾತ್ತಾಪ ಪಡುತ್ತಾರೆ. ಅವರನ್ನು ನಂಬಿಕೊಂಡಿರುವವರೂ ಪಶ್ಚಾತ್ತಾಪ ಪಡುತ್ತಾರೆ. ಹಾಗೆ ನೋಡುತ್ತಾ ಇರಿ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ಇದೆ. ಶಾಸಕಾಂಗ ಪಕ್ಷ ಇದೆ. ಜತೆಗೆ ಪಕ್ಷಾಂತರ ನಿಷೇಧ ಕಾಯಿದೆ ಇದೆ. ಪಕ್ಷಾಂತರಿಗಳಿಗೆ ಚೆನ್ನೈನ ಹೈಕೋರ್ಟ್ ಯಾವ ರೀತಿ ಪಾಠ ಕಲಿಸಿದೆ ಎಂಬುದು ಕಣ್ಣ ಮುಂದೆಯೇ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂದು ತಮಗೆ ಅನಿಸುವುದಿಲ್ಲ ಎಂದು ಡಿಕೆಶಿ ಹೇಳಿದರು.

ಬಿಜೆಪಿಯ ಮೂರ್ನಾಲ್ಕು ಶಾಸಕರು ಮುಂಬಯಿಯಲ್ಲಿ ಕುಳಿತುಕೊಂಡು ಆಪರೇಷನ್ ಕಮಲಕ್ಕೆ ತರೇಹವಾರಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅವರು ಒಂದಿಬ್ಬರು ಶಾಸಕರ ಸಂಪರ್ಕ ಸಾಧಿಸಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂಥ ಬೆಳವಣಿಗೆಯೇನೂ ನಡೆದಿಲ್ಲ. ಕಾಂಗ್ರೆಸ್ ಶಾಸಕರು ಪಕ್ಷದ ಜತೆ ನಿಂತಿದ್ದಾರೆ ಎಂದರು.

ಈ ಮಧ್ಯೆ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿಯವರನ್ನು ನೀಚರು ಎಂದು ಡಿಕೆಶಿ ಜರಿದರು. ವಿಧಾನ ಮಂಡಲದ ಜಂಟಿ ಅಧಿವೇಶನ ಇತಿಹಾಸದಲ್ಲೇ ರಾಜ್ಯಪಾಲರಿಗೆ ಆಗೌರವ ತೋರಿಸಿದ ನಿದರ್ಶನ ಇಲ್ಲವೇ ಇಲ್ಲ. ರಾಜ್ಯಪಾಲರಿಗೆ ಅಗೌರವ ತೋರಿಸಿದ್ದು ಇದೇ ಮೊದಲು ಎಂದರು

ಬಿಜೆಪಿಯವರು ಇಂಥ ವರ್ತನೆಯಿಂದ ತಮ್ಮ ಗೌರವ ಕಳೆದುಕೊಳ್ಳುತ್ತಾರೆಯೇ ಹೊರತು ಅವರಿಗೆ ಬೇರಾವುದೇ ಪ್ರಯೋಜನ ಆಗುವುದಿಲ್ಲ ಎಂದು ಟೀಕಿಸಿದರು. ಅಧಿಕಾರಕ್ಕಾಗಿ ಬಿಜೆಪಿಯವರು ಎಂಥ ನೀಚ ಕೆಲಸಕ್ಕೂ ಸಿದ್ಧ ಎಂಬುದು ಅವರ ವರ್ತನೆಯಿಂದ ದೃಢಪಡುತ್ತಿದೆ ಎಂದು ಅವರು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com