‘ತಮ್ಮ ಕೆಲಸಕ್ಕಷ್ಟೇ ಕರೆಯುತ್ತಾರೆ’ : ಆಲಿಯಾ ಭಟ್, ಅಮೀರ್ ಖಾನ್ ವಿರುದ್ಧ ಕಂಗನಾ ಕೆಂಡಾಮಂಡಲ

ಬಾಲಿವುಡ್ ಸ್ಟಾರ್‌ಗಳು ತಮ್ಮ ಕೆಲಸಕ್ಕಷ್ಟೇ ಕರೆಯುತ್ತಾರೆ, ನನ್ನನ್ನು ಬೆಂಬಲಿಸದೆ ಬೆನ್ನು ಹಾಕುತ್ತಾರೆ ಎಂದು ಕಂಗನಾ ರಾನಾವತ್ ಕಿಡಿ ಕಾರಿದ್ದಾರೆ.
ತಮ್ಮ ಹೊಸ ಚಿತ್ರ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಬಾಕ್ಸಾಫೀಸ್ ಗಳಿಕೆಯಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಂತಿರುವ ಈ ಹೊತ್ತಲ್ಲಿ ಮನರಂಜನಾ ಪೋರ್ಟಲ್ ಒಂದಕ್ಕೆ ಸಂದರ್ಶನ ನೀಡಿರುವ ಕಂಗನಾ, ಆಲಿಯಾ ಭಟ್ ಹಾಗೂ ಅಮೀರ್ ಖಾನ್ ಅವರ ಹೆಸರು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕ ಬಾಲಿವುಡ್ ನಟ, ನಟಿಯರು, ನಾಚಿಕೆಯಿಲ್ಲದೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ನನ್ನನ್ನು ಕರೆಯುತ್ತಾರೆ. ಆದರೆ ನನ್ನ ಚಿತ್ರ ಬಿಡುಗಡೆಯಾಗುವ ಹೊತ್ತಲ್ಲಿ ಅವರಿಗೆ ಬೆಂಬಲ ನೀಡಲು ಸಮಯವೇ ಇರುವುದಿಲ್ಲ ಎಂದಿದ್ದಾರೆ ಕಂಗನಾ.
“2014ರಲ್ಲಿ ಕ್ವೀನ್ ಚಿತ್ರದ ವೇಳೆ ನನಗೆ ಎಲ್ಲಾ ಗೌರವ ಸಿಕ್ಕಿರಲಿಲ್ಲ. ನಿರ್ದೇಶಕ ವಿಕಾಸ್ ಹಾಗೂ ನಿರ್ಮಾಪಕ ಅನುರಾಗ ಕಶ್ಯಪ್ ಅವರು ಗಣ್ಯರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರೂ ಯಾರೂ ಬರಲಿಲ್ಲ. ನನ್ನನ್ನು ನಿರ್ಲಕ್ಷಿಸಲಾಯಿತು. ತನು ವೆಡ್ಸ್ ಮನು ವೇಳೆ ಕೂಡಾ ಇದೇ ಪುನರಾವರ್ತನೆಯಾಯಿತು. ಆದರೆ ಅವರ ಚಿತ್ರಗಳ ಪ್ರದರ್ಶನದ ವೇಳೆ ನಾನು ಶೂಟಿಂಗ್‌ ಎಲ್ಲಾ ರದ್ದು ಮಾಡಿ ಹೋಗುವಂತೆ ಅಪೇಕ್ಷಿಸುತ್ತಾರೆ. ಈಗ ನಾನು ಅತಿಯಾಗಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ್ದೇನೆ” ಎಂದು ಕಂಗನಾ ಹೇಳಿದ್ದಾರೆ.
ರಾಝಿ ಚಿತ್ರದ ಬಿಡುಗಡೆ ವೇಳೆ ಆಲಿಯಾ ಭಟ್ ನನಗೆ ಚಿತ್ರದ ಟ್ರೈಲರ್ ಕಳುಹಿಸಿದ್ದಳು. ದಯವಿಟ್ಟು ನೋಡು ಅಂತ ಹೇಳುತ್ತಾಳೆ. ಆದರೆ ನನ್ನ ಚಿತ್ರದ ಬೆಂಬಲಕ್ಕೆ ಬರಲೇ ಇಲ್ಲ. ಅಮೀರ್ ಖಾನ್ ತಮ್ಮ ದಂಗಲ್ ಚಿತ್ರದ ಪ್ರದರ್ಶನಕ್ಕೆ ನನ್ನನ್ನು ಆಹ್ವಾನಿಸಿದ್ದರು. ಆದರೆ ನನ್ನ ಚಿತ್ರದ ಪ್ರದರ್ಶನವನ್ನು ನೋಡಲು ಬಂದೇ ಇಲ್ಲ. ಇನ್ನೂ ಎರಡು, ಮೂರು ನನ್ನ ಚಿತ್ರಗಳು ಬಿಡುಗಡೆಯಾಗಲಿವೆ. ಅವರು ಬರುತ್ತಾರೆಂಬ ನಿರೀಕ್ಷೆಯೂ ನನಗಿಲ್ಲ ಎಂದಿದ್ದಾರೆ ಕಂಗನಾ.

Leave a Reply

Your email address will not be published.

Social Media Auto Publish Powered By : XYZScripts.com