ರಾಜ್ಯದ ನ್ಯಾಯಾಂಗ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ : ಡಿಕೆಶಿ

ಚನ್ನಪಟ್ಟಣ: ರಾಜ್ಯದ ನ್ಯಾಯಾಂಗ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಜಲಸಂಪನ್ಮೂಲನಾ ಸಚಿವ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿನ ತಾಲೂಕು ನ್ಯಾಯಾಲಯ ಸಂಕೀರ್ಣದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಸರಿದಾರಿಗೆ ತೆಗೆದು ಕೊಂಡು ಹೋಗುವಲ್ಲಿ ನ್ಯಾಯಾಲಯಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಆಧಾರಸ್ಥಂಬಗಳು, ಈ ಎಲ್ಲಾ ಅಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪೂರಕ ವಾತಾವರಣ ಅಗತ್ಯ. ನ್ಯಾಯಾಂಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಪ್ರಧಾನ್ಯತೆ ಇದ್ದು ಇಂತಹ ಕಟ್ಟಡಗಳ ಅವಕಾಶ ಇದೆ ಎಂದು ಅಭಿಪ್ರಾಯಪಟ್ಟರು.

ಭಾರತದ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದರೆ ಅದಕ್ಕೆ ನಮ್ಮ ಸಂವಿಧಾನ ಕಾರಣ, ಸರ್ಕಾರದ ಇತರ ಅಂಗಗಳು ತಪ್ಪು ಮಾಡಿದಾಗ ಸಂವಿಧಾನಕ್ಕೆ ಅಪಚಾರವಾಗದಂತೆ ಎಚ್ಚರಿಸುವ ಕೆಲಸ ನ್ಯಾಯಾಂಗದ್ದು, ನಾವೆಲ್ಲ ನ್ಯಾಯಾಲಗಳನ್ನು ದೇವಾಲಯಗಳಂತೆ ಗೌರವಿಸ ಬೇಕಿದೆ ಎಂದರು.
ಗ್ರಾಮೀಣ ವಕೀಲರ ಕೊಡುಗೆ ಅಪಾರ: ಬೆಂಗಳೂರಿನಂತೆಹ ಮಹಾನಗರದಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಹಣ ದೊರೆಯುತ್ತದೆ. ಇದನ್ನು ಬಿಟ್ಟು ಹಳ್ಳಿಗಾಡಿನ ಬಡ ಜನತೆಗೆ ನ್ಯಾಯ ಕೊಡಲು ಶ್ರಮಿಸುತ್ತಿರುವ ಗ್ರಾಮೀಣ ವಕೀಲರ ಸೇವೆ ಪ್ರಮುಖವಾದದ್ದು, ಇಂತಹ ವಕೀಲರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.

ಗ್ರಂಥಾಲಯಕ್ಕೆ ೧೦ ಲಕ್ಷ ರೂ.: ನೂತನ ನ್ಯಾಯಾಲಯ ಕಟ್ಟಡದ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿ ಮತ್ತು ಡಿಜಿಟಲೀಕರಣಕ್ಕೆ ಸಂಸದರ ನಿಧಿಯಿಂದ ೧೦ ಲಕ್ಷ ಕೊಡಿಸುವುದಾಗಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು. ಇದಕ್ಕೆ ಸಭೆಯಲ್ಲಿದ್ದ ಸಂಸದ ಡಿ.ಕೆ.ಸುರೇಶ್ ಸಹ ಸಮ್ಮತಿ ಸೂಚಿಸಿದರು.
ಕನಕಪುರದಲ್ಲೂ ಸುಸಜ್ಜಿತ ನ್ಯಾಯಾಲಯ: ಕನಕಪುರ ತಾಲೂಕು ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣಕಾಮಗಾರಿಗೆ ೩೪ ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಮುಖ್ಯನ್ಯಾಯ ಮೂರ್ತಿಗಳು ಕೂಡಲೇ ದಿನಾಂಕ ನಿಗದಿ ಮಾಡಿ ಶಂಕುಸ್ಥಾಪನೆ ನೆರೆವೇರಿಸ ಬೇಕೆಂದು ಮನವಿ ಮಾಡಿದರು.
ನ್ಯಾ.ರಮೇಶ್ ಬಗ್ಗೆ ಮೆಚ್ಚುಗೆ: ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಹುಲುವಾಡಿ.ಜಿ.ರಮೇಶ್ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ತಾಲೂಕಿನ ಕೆರೆಗಳನ್ನು ತುಂಬಿಸಲು ಇವರ ಕೊಡುಗೆ ಅಪಾರವಾದದ್ದು, ನಾವು ಬೋರ್ಡು ಹಾಕಿಕೊಳ್ಳುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.

Leave a Reply

Your email address will not be published.

Social Media Auto Publish Powered By : XYZScripts.com