‘ಸೀತಾರಾಮ ಕಲ್ಯಾಣ’ ಚಿತ್ರದ ಟಿಕೆಟ್‌ ಫ್ರೀ ಕೊಟ್ರೆ ನಿಖಿಲ್ ರಾಜಕೀಯಕ್ಕೆ ಬರಲು ಸಾಧ್ಯನಾ..?

ರಾಜಕೀಯ ಮತ್ತು ಸಿನಿಮಾ ಒಂದೇ ನಾಣ್ಯದ ಮುಖಗಳಿದ್ದಂತೆ. ಸಿನಿಮಾ ಮತ್ತು ರಾಜಕೀಯದಲ್ಲಿ ಜನಮನ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ. ಆದರೆ ಸಿನಿಮಾದಲ್ಲಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡವರು ರಾಜಕೀಯಕ್ಕೆ ಇಳಿಯಬಹುದು. ರಾಜಕೀಯದಲ್ಲಿ ಬೆಳೆದವರು ಸಿನಿಮಾ ರಂಗದಲ್ಲಿ ಬೆಳೆಯಬಹುದು. ಹೀಗಾಗಿ ಲೋಕಸಭೆ ಚುನಾವಣೆ ಇನ್ನೇನು ಹತ್ತಿರವಿರುವುದರಿಂದ  ಯಾವ ಕ್ಷೇತ್ರದಲ್ಲಿ ಯಾರನ್ನ ನಿಲ್ಲಿಸಬೇಕು ಅನ್ನೋದು ಸದ್ಯ ಎಲ್ಲಾ ಪಕ್ಷದಲ್ಲಿ ಕಾಡುತ್ತಿರುವ ಪ್ರಶ್ನೆ.

ಆದರೆ ಕುಮಾರ ಸ್ವಾಮಿ ಅವರು ಮಾತ್ರ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಕಾರಣ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ರಾಜಕೀಯ ಅಖಾಡಕ್ಕಿಳಿಸುವಲ್ಲಿ ಸಿಎಂ ಇನ್ನೂ ನಿರ್ಧಾರ ಮಾಡಿಲ್ಲವಂತೆ. ಈ ಪ್ರಶ್ನೆಗೆ ಸಿಎಂ ಉತ್ತರಿಸಿದ್ದು ಹೀಗೆ.

‘ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರಬೇಕು ಎನ್ನುವುದಾದರೆ ಖಂಡಿತ ಚುನಾವಣೆಗೆ ನಿಲ್ಲಿಸುತ್ತೇವೆ. ಆದರೆ ಆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಹಲವು ಸುದ್ದಿಗಳು ಹಬ್ಬಿವೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಮೌನ ಮುರಿದರು.

ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಸ್ಪರ್ಧಿಸುವಂತೆ ಮಾಡಲು ‘ಸೀತಾರಾಮ ಕಲ್ಯಾಣ’ ಚಿತ್ರದ ಟಿಕೆಟ್‌ ಅನ್ನು ಉಚಿತ ಟಿಕೆಟ್‌ ವಿತರಿಸಲಾಗುತ್ತಿದೆ ಎಂಬ ಸುದ್ದಿಯನ್ನು ಕುಮಾರಸ್ವಾಮಿ ತಳ್ಳಿ ಹಾಕಿದರು. ‘ಮಂಡ್ಯದಲ್ಲಿ ಉಚಿತ ಟಿಕೆಟ್ ಹಂಚಿದರೆ ರಾಜ್ಯದಲ್ಲಿ ಸಿನಿಮಾ ಹೇಗೆ ಓಡುತ್ತದೆ?’ ಎಂದು ಪ್ರಶ್ನಿಸಿದರು.

‘ನಾನು ಒಬ್ಬ ಮುಖ್ಯಮಂತ್ರಿಯಾಗಿ ಅಥವ ಅಪ್ಪನಾಗಿ ಈ ಮಾತನ್ನು ಹೇಳುತ್ತಿಲ್ಲ. ನಿಖಿಲ್ ಅಭಿನಯದ ಬಗ್ಗೆ ತುಂಬಾ ಜನ ಮಾತನಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ಸೀತರಾಮ ಕಲ್ಯಾಣ ಸಿನಿಮಾ ‌ಟಿಕೆಟ್ ಉಚಿತವಾಗಿ ಹಂಚುತ್ತಿದ್ದಾರೆ ಎಂಬ ಸುದ್ದಿ ಬಗ್ಗೆ ಕಿಡಿಕಾರಿದ ಎಚ್.ಡಿ.ಕುಮಾರಸ್ವಾಮಿ, ‘ಇಷ್ಟೊಂದು ಚೀಪ್ ಆಗಿ ರಾಜಕಾರಣ ಯಾರು ಮಾಡುತ್ತಿದ್ದಾರೆ ಅಂತ ಗೊತ್ತಿದೆ. ನಂಗೆ ಅಷ್ಟು ಗೊತ್ತಾಗೋದಿಲ್ವಾ. ಕೇವಲ ಮಂಡ್ಯದಲ್ಲಿ ಮಾತ್ರ ಫ್ರೀ ಟಿಕೆಟ್ ಹಂಚಿದ್ರೆ , ರಾಜ್ಯ ದ ಬೇರೆ ಬೇರೆ ಕಡೆ ಸಿನಿಮಾ ಹೇಗೆ ನಡೆಯುತ್ತಿದೆ? ಅಂತ ನೋಡಿಕೊಂಡು ಬನ್ನಿ’ ಎಂದರು.
‘ಆತ ಚಿತ್ರ ರಂಗದಲ್ಲಿ ಬೆಳೆಯುತ್ತಿದ್ದಾನೆ. ನಟನೆಯಲ್ಲಿ ಆಸಕ್ತಿ ಹೊಂದಿದ್ದಾನೆ. ಆತನನ್ನು ರಾಜಕೀಯಕ್ಕೆ ಎಳೆಯುವುದಕ್ಕೆ ಒಂದು ವರ್ಗದ ಮಾಧ್ಯಮದವರೇ ಉತ್ತೇಜಿಸುತ್ತಿದ್ದಾರೆ. ರಾಜಕೀಯಕ್ಕೆ ಬರಬೇಕು ಎನ್ನುವುದಾದರೆ ಖಂಡಿತ ಚುನಾವಣೆಗೆ ನಿಲ್ಲಿಸುತ್ತೇವೆ. ಆದರೆ, ಆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ’ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

‘ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ಯಾರು ಹೇಳಿಲ್ಲ. ಮಂಡ್ಯದಲ್ಲಿ ದೇವೇಗೌಡರು ಸ್ಪರ್ಧಿಸಲಿ, ಅವರ ಪರ ಕೆಲಸ ಮಾಡುವೆ ಎಂದು ನಿಖಿಲ್ ಹೇಳಿದ್ದಾನೆ. ನಿಖಿಲ್ ಸ್ಪರ್ಧೆ ಮಾಡುತ್ತಾರೆ ಅಂತಾ ಹೇಳಿ ಹೇಳಿ, ನಿಲ್ಲುವಂತೆ ನೀವೇ ಪ್ರೋವೋಕ್ ಮಾಡುತ್ತಿದ್ದೀರಿ. ಮಂಡ್ಯದಲ್ಲಿ ನಿಖಿಲ್ ಅಥವ ನಾನು ಸ್ಪರ್ಧೆ ಮಾಡುತ್ತೀನಿ ಅಂತ ಎಲ್ಲೂ ಹೇಳಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

ಮಂಡ್ಯ ನಮ್ಮ ಭದ್ರಕೋಟೆ ‘ಮಂಡ್ಯ ನಮ್ಮ ಪಕ್ಷದ ಭದ್ರಕೋಟೆ. ನಮ್ಮ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರುವುದಿಲ್ಲ. ಅಂಬರೀಶ್ ಕುಟುಂಬದವರು ನಮ್ಮ‌ಪಕ್ಷಕ್ಜೆ ಸೇರಿದವರಲ್ಲ. ಅವರು ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ನಾವು ವಿರೋಧಿಸುವುದಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Leave a Reply

Your email address will not be published.