ಬ್ರಿಟನ್ ನ ನಾಯಿ ತಲೆ ತೆಗೆಯಲು 20 ಲಕ್ಷ ಸುಪಾರಿ : ದುಷ್ಕರ್ಮಿಗಳ ಗ್ಯಾಂಗ್ ಗೆ ತಲೆನೋವಾದ ಶ್ವಾನ..!

ಬ್ರಿಟನ್ ನ ಡಾಗ್ ಸ್ವಾಡ್ ನ ನಾಯಿ ತಲೆಗೆ ಸರಿಸುಮಾರು 20 ಲಕ್ಷ ರೂ. ಮೌಲ್ಯದ ಸುಪಾರಿ ನೀಡಲಾಗಿದೆಯಂತೆ. ಎಲ್ಲಾ ಬಿಟ್ಟು ನಾಯಿಗ್ಯಾಕಪ್ಪ ಈ ಪಾಟಿ ಸುಪಾರಿ ಅಂತ ನಿಮಗೆ ಅನ್ನಿಸಬಹುದು. ಆದರ ಹಿಂದೆಯೂ ಒಂದು ಕಥೆಯಿದೆ.

ಸ್ಕಾಂಪ್ ಅನ್ನೋ ಈ ನಾಯಿ ಬಹಳ ಚುರುಕಾಗಿದ್ದು, ತನ್ನ 5 ವರ್ಷದ ವೃತ್ತಿಜೀವನದಲ್ಲಿ ಇದುವರೆಗೆ ಸುಮಾರು 470 ಕೋಟಿ ರೂ. ಮೌಲ್ಯದ ಕಾನೂನು ಬಾಹಿರ ತಂಬಾಕು ಅನ್ನು ಪತ್ತೆ ಮಾಡಿದೆಯಂತೆ.

ಇದರಿಂದ ತಂಬಾಕು ಕಳ್ಳಸಾಗಣೆ ಗ್ಯಾಂಗ್ ಗಳಿಗೆ ತಲೆನೋವು ಉಂಟಾಗಿದೆ. ಈ ಕಾರಣ ನಾಯಿ ಸ್ಕಾಂಪ್ ಇಲ್ಲವಾದರೆ ತಮ್ಮ ಕೆಲಸ ಸುಲಭ ಎಂದುಕೊಂಡಿರುವ ಖದೀಮರು ಈ ನಾಯಿಯ ಕಥೆ ಮುಗಿಸೋಕೆ ಮುಂದಾಗಿದ್ದಾರಂತೆ.

ದುಷ್ಕರ್ಮಿಗಳ ಗ್ಯಾಂಗ್ ಈ ನಾಯಿಯನ್ನು ಗುರಿಯಾಗಿಸಿಕೊಂಡು ಅದನ್ನು ಮುಗಿಸಿದವರಿಗೆ ಸುಮಾರು 20 ಲಕ್ಷ ರೂ. ಬಹುಮಾನ ಕೊಡಲು ಮುಂದೆ ಬಂದಿವೆ ಎಂದೂ ಹೇಳಲಾಗುತ್ತಿದೆ. ಈ ನಾಯಿ ಜೊತೆಗೆ ಅದನ್ನು ನೋಡಿಕೊಳ್ಳುವ ವ್ಯಕ್ತಿಗೂ ಜೀವಭಯ ಕಾಡುತ್ತಿದೆ ಎಂದೂ ಹೇಳಲಾಗಿದೆ. ಅವರ ಕಾರಿನ ಮುಂಭಾಗ ಗಾಜನ್ನು ಒಡೆಯಲಾಗಿದೆ. ಟೈರ್ ಗಳನ್ನು ಕತ್ತರಿಸಲಾಗಿದೆ.
ನಾಯಿ ತಲೆಗೆ ಸುಪಾರಿ ಇತಿಹಾಸ ಹೊಸದೇನಲ್ಲ. ಕೊಲಂಬಿಯಾದಲ್ಲಿ ಡ್ರಗ್ ಸ್ಮಗ್ಲಿಂಗ್ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೊಂಬ್ರಾ ಎಂಬ ನಾಯಿ ತಲೆಗೆ 70,000 ಡಾಲರ್ ಅಂದರೆ ಸುಮಾರು 42 ಲಕ್ಷ ರೂ. ಸುಪಾರಿ ನೀಡಲು ಡ್ರಗ್ ಸ್ಮಗ್ಲಿಂಗ್ ಗ್ಯಾಂಗ್ ಗಳು ಮುಂದಾಗಿದ್ದವು ಎಂಬ ಸುದ್ದಿಯೂ ಬಂದಿತ್ತು.

Leave a Reply

Your email address will not be published.