ಸಿಬಿಐ ಮುಖ್ಯಸ್ಥ ಹುದ್ದೆಯಿಂದ ಅಲೋಕ್ ವರ್ಮಾರನ್ನು ವಜಾಗೊಳಿಸಿದ ಮೋದಿ ನೇತೃತ್ವದ ಸಮಿತಿ

ಸುಪ್ರೀಂ ಕೋರ್ಟ್‌ನಿಂದ ಸಿಬಿಐ ಮುಖ್ಯಸ್ಥರಾಗಿ ಮರುನಿಯುಕ್ತಿಗೊಂಡಿದ್ದ ಅಲೋಕ್ ವರ್ಮಾ ಅವರನ್ನು 48 ಗಂಟೆಗಳೊಳಗೆ ಆ ಹುದ್ದೆಯಿಂದ ವಜಾ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರದ ಆಯ್ಕೆ ಸಮಿತಿಯು ಗುರುವಾರ ಸಂಜೆ ಸಭೆ ನಡೆಸಿ, ಸಿವಿಸಿಯ ವರದಿ ಆಧಾರದಲ್ಲಿ ನಿರೀಕ್ಷಿತ ಸಮಗ್ರತೆಯಿಂದ ಕೆಲಸ ಮಾಡಿಲ್ಲ ಎಂಬ ನೆಪ ನೀಡಿ ವರ್ಮಾ ಅವರನ್ನು ವಜಾ ಮಾಡಲಾಗಿದೆ. ಜ.31ರಂದು ನಿವೃತ್ತಿಯಾಗಲಿದ್ದ ವರ್ಮಾ ಅವರು ಕೆಲವೇ ವಾರಗಳ ಮುನ್ನ ಹುದ್ದೆ ಕಳಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಿಜೆಐ ರಂಜನ್ ಗೊಗೋಯ್ ಪ್ರತಿನಿಧಿಯಾಗಿ ನ್ಯಾ.ಎ.ಕೆ.ಸಿಕ್ರಿ ಹಾಗೂ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೀಗೆ ಮೂವರನ್ನು ಒಳಗೊಂಡ ಈ ಆಯ್ಕೆ ಸಮಿತಿಯಲ್ಲಿ 2:1 ವರ್ಮಾ ವಿರುದ್ಧ ಮತ ಚಲಾಯಿಸಲಾಯಿತು. ಖರ್ಗೆ ಅವರು ಈ ನಿರ್ಧಾರವನ್ನು ವಿರೋಧಿಸಿದರು.

1. ಮೂರು ತಿಂಗಳ ಹಿಂದೆ ಮಧ್ಯರಾತ್ರಿಯ ನಿರ್ಧಾರದ ಮೂಲಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳುಹಿಸಿತ್ತು. ಅದನ್ನು ಪ್ರಶ್ನಿಸಿ ವರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎರಡು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ವರ್ಮಾ ಅವರನ್ನು ಮರುನಿಯುಕ್ತಿಗೊಳಿಸಿ ಆದೇಶಿಸಿತ್ತು. ಅಧಿಕಾರ ವಹಿಸಿಕೊಂಡ ತಕ್ಷಣ ವರ್ಮಾ ಹಂಗಾಮಿ ಸಿಬಿಐ ಮುಖ್ಯಸ್ಥರು ನೀಡಿದ್ದ 10 ಅಧಿಕಾರಿಗಳ ವರ್ಗಾವಣೆಯನ್ನು ರದ್ದುಗೊಳಿಸಿದ್ದರು.
2. ವರ್ಮಾ ಅವರನ್ನು ವಜಾಗೊಳಿಸುವ ಪ್ರಸ್ತಾಪವನ್ನು ವಿರೋಧಿಸಿದ ಸಮಿತಿ ಸದಸ್ಯ, ವಿಪಕ್ಷ ನಾಯಕ ಮಲ್ಲಿಕಾರ್ಜು ಖರ್ಗೆ, ವಿಚರಾಣೆ ನಡೆಸದೆ ವರ್ಮಾ ಅವರನ್ನು ವಜಾಗೊಳಿಸುವುದು ಹೇಗೆ ಎಂದು ಪ್ರಶ್ನಿಸಿದರು. ಸಿಬಿಐನ ಸ್ವಾತಂತ್ರ್ಯ ಹಾಗೂ ತಾಟಸ್ಥ್ಯವನ್ನು ಕಾಪಾಡಬೇಕು. ಸಿವಿಸಿ ವರದಿಯಲ್ಲಿ ವರ್ಮಾ ವಿರುದ್ಧ ಗುರುತರವಾದ ಸಾಕ್ಷ್ಯವಿಲ್ಲ ಎಂದು ವಾದಿಸಿದರು.
ಸರ್ಕಾರದ ಈ ನಡೆಗೆ ವಿಪಕ್ಷಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com