ಯಶಸ್ವಿಯಾಯಿತು ಸಮ್ಮೇಳನ – ಕುಮಾರಸ್ವಾಮಿಯ ‘ಇಂಗ್ಲಿಷ್’ ಸುತ್ತ ಗಿರಕಿ ಹೊಡೆದ ಕನ್ನಡ ಮೇಳ!

ಯಶಸ್ವಿಯಾಯಿತು ಸಮ್ಮೇಳನ
ಕುಮಾರಸ್ವಾಮಿಯ ‘ಇಂಗ್ಲಿಷ್’ ಸುತ್ತ ಗಿರಕಿ ಹೊಡೆದ ಕನ್ನಡ ಮೇಳ!
ಉದ್ಘಾಟನೆಯಾಗಿದ್ದು ಬಲು ತಡವಾಗಿ-ಹೇಗೆಂದರೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿಗಳು ಬೇಡ ಎಂದು ತಡವಾಗಿ ವಿರೋಧಿಸಿದಂತೆ! ಉದ್ಘಾಟನೆ ತಡವಾಗಲು ಕಾರಣರಾದ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ಇಡೀ ಸಾಹಿತ್ಯ ಸಮ್ಮೇಳನದ ಮುಖ್ಯ ಅಜೆಂಡಾವನ್ನು ತಮಗೇ ಗೊತ್ತಿಲ್ಲದಂತೆ ಸೆಟ್ ಮಾಡಿ ಹೋಗಿಬಿಟ್ಟರು. ಮೊದಲ ದಿನ ಮಟಮಟ ಮಧ್ಯಾಹ್ನ ಕುಮಾರಸ್ವಾಮಿ ಹತ್ತಿಸಿದ ಈ ಚರ್ಚೆಯ ಕಿಡಿ, ಚುಮುಚುಮು ಚಳಿಯ ನಡುವೆ ನಡೆದ ಸಮಾರೋಪದಲ್ಲಿ ಸಿದ್ದರಾಮಯ್ಯನವರು ಮಾತಾಡಿದ ಮೇಲೆ ಒಂದು ಹಂತಕ್ಕೆ ಬಂದಿತಾದರೂ, ಈಗ ಈ ವಿಷಯ ಮೈತ್ರಿ ಬಣಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಲೂ ಬಹುದು. ಇನ್ನೊಂದು ಕಡೆ, ಸಾಹಿತಿಗಳು, ರಾಜಕಾರಣಿಗಳ ನಡುವೆ ‘ವಾಗ್ವಾದ’ಕ್ಕೂ ಕಾರಣವಾಗಬಹುದು. ಇವೆರಡಕ್ಕೂ ಈಗಾಗಲೇ ಸಮ್ಮೇಳನವೇ ಮುನ್ನುಡಿ ಬರೆದಾಗಿದೆ.
ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೀಗ ವರ್ತಮಾನದ ರಾಜಕಾರಣ ಮತ್ತು ಸಾಹಿತ್ಯ ವಲಯದಲ್ಲಿ ಒಂದು ಚರ್ಚೆಯ ವಸ್ತುವನ್ನು ನೀಡಿದೆ. ಹೀಗಾಗಿದ್ದು ಒಳ್ಳೆಯದೇ ಆಗಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗಾವಿಯಲ್ಲಿ ಸದನದಲ್ಲೇ, ‘ಮುಂದಿನ ವರ್ಷದಿಂದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿಗಳನ್ನು ಆರಂಭಿಸಲು ಸಿದ್ಧತೆ ಆರಂಭಿಸಲಾಗಿದೆ. ಈಗಾಗಲೇ 1200 ಶಿಕ್ಷಕರಿಗೆ ಇಂಗ್ಲಿಷ್ ತರಬೇತಿಯನ್ನೂ ನೀಡಲಾಗುತ್ತಿದೆ’ ಎಂದಾಗಲೇ ಬಹುದೊಡ್ಡ ಚರ್ಚೆಯ ಅಥವಾ ಕಳವಳದ ವಿಚಾರ ಇದಾಗಬೇಕಿತ್ತು. ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟಸಲೆಂದೇ ಮತ್ತು ಸಾಧ್ಯವಾದರೆ ‘ಆಪರೇಷನ್ ಕಮಲ’ ನಡೆಸಲೆಂದೇ ಬಂದಂತಿದ್ದ ವಿರೋಧ ಪಕ್ಷ ಬಿಜೆಪಿಗಂತೂ ಇದು ಮುಖ್ಯ ಅನಿಸದೇ ಇರವುದರಲ್ಲಿ ಆಶ್ಚರ್ಯವೇನಿಲ್ಲ. ಅಂದು ಸದನದಲ್ಲಿ ಇರದಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಮಾತನಾಡುತ್ತ ಕುಮಾರಸ್ವಾಮಿಯವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದರು. ನಂತರ ಕೆಲವು ಸಾಹಿತಿಗಳು ಕೂಡ ಸಾಂಕೇತಿಕವಾಗಿ ಮುಖ್ಯಮಂತ್ರಿ ನಿಲುವನ್ನು ವಿರೋಧಿಸಿದರು. ಸಮ್ಮೇಳನದಿಂದಾಗಿ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆ ಕಾರಣಕ್ಕೇ ಸಮ್ಮೇಳನ ತರಾತುರಿಯಲ್ಲಿ ತನ್ನ ಐದು ನಿರ್ಣಯಗಳಲ್ಲಿ ‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳ ಬೇಡ’ ಎಂಬುದನ್ನು ಹೈಲೈಟ್ ಮಾಡಬೇಕಾಗಿತು.
ವರ್ಗ ತಾರತಮ್ಯದ ತಳುಕು!
ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣಕ್ಕೂ ಮೊದಲು ಮಾತನಾಡಿದ ಚಂದ್ರಶೇಖರ ಪಾಟೀಲರು ಈ ವಿಷಯದ ಪ್ರಸ್ತಾಪ ಮಾಡಿ, ಮುಖ್ಯಮಂತ್ರಿಗಳು ತಮ್ಮ ನಿಲುವು ಸ್ಪಷಪಡಿಸಬೇಕು ಎಂದರು. ನಂತರದ ಅಧ್ಯಕ್ಷೀಯ ಭಾಷಣದಲ್ಲೂ ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಒತ್ತು ನೀಡಲಾಗಿತ್ತು.
ಇದೆಲ್ಲವನ್ನೂ ನಿರೀಕ್ಷಿಸಿಯೇ ಬಂದಂತಿದ್ದ ಕುಮಾರಸ್ವಾಮಿ ತಮ್ಮ ಕನ್ನಡ ಪ್ರೇಮವನ್ನು ಒತ್ತಿ ಒತ್ತಿ ಹೇಳುತ್ತಲೇ, ಇಂಗ್ಲಿಷ್ ಮಾಧ್ಯಮದ ತರಗತಿಗಳನ್ನು ಪರೋಕ್ಷವಾಗಿ ಬೆಂಬಲಿಸಿದರು. ಒಂದು ಹಂತದಲ್ಲಿ ನೇರವಾಗಿ ಚಂಪಾರವರೇ, ಕಂಬಾರವರೇ ಎಂದು ನೇರವಾಗಿ ಮಾತಿಗಿಳಿದು, ಈ ಶಿಕ್ಷಣ ಮಾಧ್ಯಮ ಸಮಾಜದಲ್ಲಿ ವರ್ಗ ತಾರತಮ್ಯ (ಕುಮಾರಸ್ವಾಮಿಯವರ ಭಾಷೆಯಲ್ಲಿ ‘ವರ್ಗೀಕರಣ’) ಸೃಷ್ಟಿಸುತ್ತಿದೆ. ಉದ್ಯೋಗ ಕೊಡುವ ಭಾಷಾ ಮಾಧ್ಯಮ ಉಳ್ಳವರ ಮಕ್ಕಳಿಗಷ್ಟೇ ತಲುಪುತ್ತಿದೆ. ಆಟೋ ಡ್ರೈವರ್‍ಗಳು, ಕೃಷಿ ಕಾರ್ಮಿಕರು, ಮನೆಗೆಲಸದವರು ಸಾಲಸೋಲ ಮಾಡಿ ತಮ್ಮ ಮಕ್ಕಳನ್ನು ಕಾನ್ವೆಂಟುಗಳಿಗೆ ಕಳಿಸುತ್ತಿದ್ದಾರೆ. ಇವರಿಗೆಲ್ಲ ನ್ಯಾಯ ಒದಗಿಸುವುದು ತಪ್ಪೇ ಎಂದು ಪ್ರಶ್ನಿಸುವ ಮೂಲಕ ಜನಸ್ತೋಮದ ಚಪ್ಪಾಳೆಯನ್ನೂ ಗಿಟ್ಟಿಸಿದರು.
ಖಾಸಗಿ ಕಾನ್ವೆಂಟುಗಳ ಮೇಲೆ ಪ್ರಹಾರ ನಡೆಸಿದ ಕುಮಾರಸ್ವಾಮಿ, ಖಾಸಗಿ ಶಾಲೆಗಳ ನಿಷೇಧಕ್ಕೆ ಈ ಸಮ್ಮೇಳನ ನಿರ್ಣಯ ಕೈಗೊಂಡರೆ, ಅದನ್ನು ಜಾರಿ ಮಾಡಲು ಸಿದ್ಧ, ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣಕ್ಕೂ ತಾವು ಸಿದ್ಧ ಎಂದು ಘೋಷಿಸಿದರು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿಗಳ ಆರಂಭದ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಲೇ ಹೋದ ಕುಮಾರಸ್ವಾಮಿ, ಈ ವಿಷಯದಲ್ಲಿ ತಾವು ಚರ್ಚೆಗೆ ಸಿದ್ಧ ಎಂಬ ವಿನಮ್ರದ ಮಾತುಗಳೊಂದಿಗೆ ಭಾಷಣ ಮುಗಿಸಿದರು.
ಅಲ್ಲಿಂದ ಶುರುವಾದ ಈ ವಾಗ್ವಾದ ನಂತರದ ಎರಡು ದಿನಗಳ ಹಲವು ಗೋಷ್ಠಿಗಳಲ್ಲಿ ಪ್ರತಿಧ್ವನಿಸಿತು. ಕೊನೆಯ ದಿನದಂದು ಸಾಧಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಮತ್ತು ನಿತ್ಯ ಸಿಎಂ ಪಟ್ಟದ ಆಕಾಂಕ್ಷಿ ಯಡಿಯೂರಪ್ಪನವರು ಶಿಕ್ಷಣ ಮಾಧ್ಯಮದ ಬಗ್ಗೆ ವ್ಯಕ್ತಪಡಿಸಿದ ನಿಲುವು ಅವರ ಸದ್ಯದ ಗೊಂದಲಮಯ ರಾಜಕೀಯದಂತೆಯೇ ಇತ್ತು.
ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತಾಡಿದ ಮೇಲಷ್ಟೇ ಹಲವಾರು ಸಾಹಿತಿಗಳ ನೈತಿಕ ಧೈರ್ಯ ಇಮ್ಮಡಿಯಾಗಿತು. ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಇರಬೇಕು, ಈ ವಿಚಾರವಾಗಿ ಕುಮಾರಸ್ವಾಮಿಯೊಂದಿಗೆ ತಾವು ಮಾತಾಡಿ ಎಲ್ಲ ಸರಿಪಡಿಸುವುದಾಗಿ ಹೇಳಿದ ಸಿದ್ದರಾಮಯ್ಯ, ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣದ ಬಗ್ಗೆ ಇಲ್ಲಿ ಚರ್ಚೆಯಾಗಿದೆ, ಸಂವಿಧಾನದಲ್ಲಿ ಅದಕ್ಕೆಡ ಅವಕಾಶವಿದೆಯೇ ಎಂಬುದನ್ನು ಕೇಂದ್ರ ಪರಿಶೀಲಿಸಬೇಕು ಮತ್ತು ಇಲ್ಲದಿದ್ದರೆ ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದರು.
ಗಿರಕಿ ಹೊಡೆಯುತ್ತಲೇ ಇದೆ!
ಉದ್ಘಾಟನಾ ಸಮಾರಂಭದ ರಾತ್ರಿ ನಡೆದ ‘ದಲಿತ ಅಸ್ಮಿತೆ’ ಗೋಷ್ಠಿಯಲ್ಲೂ ಕುಮಾರಸ್ವಾಮಿಯವರ ನಿಲುವನ್ನು ವಿರೋಧಿಸಿದ ಡಾ. ಕೆ.ಬಿ. ಸಿದ್ದಯ್ಯನವರು, ದಲಿತ ಅಸ್ಮಿತೆ ಅಂದರೆ ಅದು ಕನ್ನಡ ಅಸ್ಮಿತೆಯೇ ಆಗಿದೆ, ಹೀಗಾಗಿ ಇಲ್ಲಿ ವರ್ಗ ತಾರತಮ್ಯದ ಪ್ರಶ್ನೆ ಎತ್ತುವುದೇ ಅಪರಾಧ ಎಂದು ಅಭಿಪ್ರಾಯ ಪಟ್ಟರು.
ಈ ನಡುವೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಚಂಪಾರ ಮೊಮ್ಮಕ್ಕಳೇನು ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆಯೇ ಎಂದು ಪ್ರಶ್ನೆ ಎಸೆದು ಹೋದರು. ನನ್ನ ಮೊಮ್ಮಕ್ಕಳು ಕನ್ನಡ ಮಾಧ್ಯಮದಲ್ಲೇ ಓದಿದ್ದಾರೆ ಎಂದು ಚಂಪಾ ಪ್ರತ್ಯುತ್ತರ ನೀಡಿ ಹೇಳಿಕೆ ಕೊಟ್ಟರು.
ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನದ ಅಜೆಂಡಾವನ್ನು ಕುಮಾರಸ್ವಾಮಿಯೇ ಬರೆದರು ಮತ್ತು ಅದರ ಸುತ್ತಲೇ ಸಮ್ಮೇಳನ ಗಿರಕಿ ಹೊಡೆಯಿತಾದರೂ, ಹಲವು ಗೋಷ್ಠಿಗಳು ಕರ್ನಾಟಕದ ಜನರ ಸದ್ಯದ ಬದುಕಿನ ತಾಕಲಾಟದ ಮೇಲೆ ಬೆಳಕು ಚೆಲ್ಲಲು ಯಶಸ್ವಿಯಾದವು.
ಊಟ, ವಸತಿ, ಸಂಚಾರ ನಿಯಂತ್ರಣ, ಅಚ್ಚುಕಟ್ಟುತನ-ಹೀಗೆ ಎಲ್ಲ ವಿಭಾಗಗಳನ್ನು ಅವಲೋಕಿಸಿದರೆ ಈ ಸಮ್ಮೇಳನ ಯಶಸ್ವಿಯಾಗಿದೆ. ಅದರ ಶ್ರೇಯಸ್ಸು ಜಿಲ್ಲಾಧಿಕಾರಿ ದೀಪಾ ಚೋಳನ್‍ಗೆ ಸಲ್ಲುತ್ತದೆ ಎಂದು ಜನಸಾಮಾನ್ಯರೇ ಸರ್ಟಿಫಿಕೇಟ್ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com