ಧಾರವಾಡ ಸಮ್ಮೇಳನದಲ್ಲಿ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟರಿಗೆ ಅಸಮಾಧಾನ..? : ವಸ್ತುಸ್ಥಿತಿ ಏನು?

ಧಾರವಾಡ ನೆಲದ ಸಾಹಿತ್ಯ ಅಂಗಳದಲ್ಲಿ ಪ್ರಮುಖರಾಗಿರುವ ಸಿದ್ದಲಿಂಗ ಪಟ್ಟಣಶೆಟ್ಟರನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರ್ಲಕ್ಷಿಸಿದೆ, ಪಟ್ಟಣಶೆಟ್ಟಿ ದಂಪತಿಗಳು ಇದರಿಂದ ಅಸಮಾಧಾನಗೊಂಡಿದ್ದಾರೆ ಎಂಭ ವರದಿಗಳು ಸಮ್ಮೇಳನದ ಎರಡನೇ ದಿನದಂದು ಬಂದ ಪತ್ರಿಕೆಗಳಲ್ಲಿ ವರದಿಯಾಗಿತ್ತು. ವಿವರಗಳೇ ಇರಲಿಲ್ಲ. ಅವತ್ತೇ ನಮ್ಮ ಪತ್ರಿಕೆ ಪಟ್ಟಣಶೆಟ್ಟಿ ದಂಪತಿಗಳನ್ನು ಫೋನಿನಿನಲ್ಲಿ ಸಂಪರ್ಕಿಸಿ ಮಾತಿಗೆ ಎಳೆಯಲು ಯತ್ನಿಸಿದಾಗ ಅವರು, ನಾಳೆ (ಕೊನೆ ದಿನ) ಅಲ್ಲಿಯೇ ಸಿಗೋಣ ಬಿಡಿ ಎಂದರು.

ಕೊನೆದಿನ ಕನ್ನಡ ಗಣಕ ಪರಿಷತ್ತಿನ ಸ್ಟಾಲ್‍ನಲ್ಲಿ ಸಿಕ್ಕ ಪಟ್ಟಣಶೆಟ್ಟಿ ದಂಪತಿಗಳು ತಮ್ಮ ನೋಬನ್ನು ಪತ್ರಿಕೆಯ ಮುಂದೆ ಹೇಳಿಕೊಂಡರು. ಒಲ್ಲದ ಮನಸ್ಸಿನಿಂದ ವಿವರ ನೀಡಿದ ಸಿದ್ದಲಿಂಗ ಪಟ್ಟಣಶೆಟ್ಟಿಯವರು, ‘ಸಮ್ಮೇಳನದ ಆಮಂತ್ರಣ ಪತ್ರಿಕೆಯ ಅನಾವರಣದಲ್ಲಿ ಚನ್ನವೀರ ಕಣವಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಪಾಟೀಲರೊಂದಿಗೆ ನಾನೂ ಇದ್ದೆ. ಸಮ್ಮೇಳನದ ಸಲಹಾ ಸಮಿತಿಯಲ್ಲಿ ನನ್ನನ್ನು ಸೇರಿಸಿಕೊಂಡಿದ್ದರು. ಸಮ್ಮೇಳನದ ಹಿಂದಿನ ದಿನದ ಕೊನೆ ಗಳಿಗೆಯಲ್ಲೂ ನಮಗೆ ವಿಶೇಷ ಪಾಸ್ ಅಥವಾ ಬ್ಯಾಡ್ಜ್ ಕಳಿಸಲಿಲ್ಲ. ಸಮ್ಮೇಳನದ ದಿನದ ಮುಂಜಾನೆ ಫೋನ್ ಮಾಡಿದ ಲಿಂಗರಾಜ ಪಾಟೀಲರು 9 ಗಂಟೆಗೆ ಕಾರು ಕಳಿಸುವುದಾಗಿ ಹೇಳಿದರು. ಹನ್ನೊಂದೂವರೆಯಾದರೂ ಕಾರು ಬರಲಿಲ್ಲ. ವಸುಂಧರಾ ಭೂಪತಿ ನಮ್ಮನ್ನು (ಪಟ್ಟಣಶೆಟ್ಟಿ ದಂಪತಿ) ಕಾರಿನಲ್ಲಿ ಸಮ್ಮೇಳನಕ್ಕೆ ಕರೆದುಕೊಂಡು ಬಂದರು. ಬ್ಯಾಡ್ಜ್ ಇಲ್ಲದ ನಮ್ಮನ್ನು ಹಾಗೂ ಹೀಗೂ ಮಾಡಿ ಅವರೇ ಒಳಗೆ ಕಳಿಸಿ ಕೂಡಿಸಿದರು…..

‘ಉದ್ಘಾಟನೆ 3 ತಾಸು ತಡವಾಯಿತಲ್ಲ, ನನಗೆ ಮೂತ್ರ ವಿಸರ್ಜನೆಯ ಒತ್ತಡ ಹೆಚ್ಚತೊಡಗಿತು. ಯಾರೂ ಸಹಾಯಕರಿಲ್ಲದೇ ಹೋಗುವ ಸ್ಥಿತಿಯಲ್ಲಿ ಈ ವಯಸ್ಸಿನಲ್ಲಿ ಕಷ್ಟ. ಹಾಗೊಮ್ಮೆ ಒಬ್ಬನೇ ಹೊರಗೆ ಹೋದರೆ ವಾಪಸ್ ಒಳಗೆ ಬರಲು ‘ಪಾಸ್; ಬೇರೆ ಇಲ್ಲವಲ್ಲ ಎಂದುಕೊಂಡು ನಾವಿಬ್ಬರೂ ಮನೆಗೇ ಹೋಗಲು ನಿರ್ಧರಿಸಿ ಹೊರಟೇ ಬಿಟ್ಟೆವು. ದೂರದಿಂದ ನಮ್ಮನ್ನು ಗಮನಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಪೊಲೀಸ್ ಅಧಿಕಾರಿ ಒಬ್ಬರನ್ನು ಕಳಿಸಿ, ನೆರವು ನೀಡಿದರು… ಸಂಜೆ ಹೊತ್ತಿನಲ್ಲಿ ಮೀಡಿಯಾ ಸೆಂಟರ್‍ನಲ್ಲಿ ತಮ್ಮ ಊಟದಲ್ಲೇ ನಮಗೂ ನೀಡಿ ಮಗಳಂತೆ ಪ್ರೀತಿ ತೋರಿಸಿದರು…

‘ನಮಗೆ ಅಸಮಾಧಾನ ಆಗಿದ್ದಂತೂ ನಿಜ. ಎಲ್ಲೋ ಲೋಪವಾಗಿರಬೇಕು. ಆದರೂ ಮೂರನೇ ದಿನ ನಾವು ಬಂದಿದ್ದೇವೆ. ಆದರೆ ನಮ್ಮ ಮೌನ ಪ್ರತಿಭಟನೆ ಹೀಗೇ ಇರಲಿದೆ’ ಎಂದರು. ಕಸಾಪ ಕಂಡ ಕಂಡ ಪುಢಾರಿಗಳಿಗೆಲ್ಲ ಗೋಷ್ಠಿ ನಿರ್ವಹಿಸಲು, ನಿರೂಪಿಸಲು, ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದಿಸಲು ಅವಕಾಶ ನೀಡಿದೆ. ಕಳೆದ ಐದಾರು ದಶಕಗಳ ಕಾಲ ಧಾರವಾಡ ಸಾಹಿತ್ಯ ಲೋಕವನ್ನು ಜೀವಂತವಾಗಿಡುವಲ್ಲಿ ಶ್ರಮಿಸಿದ ಪಟ್ಟಣಶೆಟ್ಟರನ್ನು ನಿರ್ಲಕ್ಷಿಸಿದ್ದು ಮಾತ್ರ ಅಕ್ಷಮ್ಯ. ಕಲಬುರ್ಗಿ, ಗಿರಡ್ಡಿ ಗೋವಿಂದರಾಜರು ಇರದ ಸಮ್ಮೇಳನದಲ್ಲಿ ಪಟ್ಟಣಶೆಟ್ಟರು ಇದ್ದೂ ಇಲ್ಲದಂತಾದರು. ಹಾಗಂತ ಸಾಹಿತ್ಯ ಲೋಕದಲ್ಲಿ ಪಟ್ಟಣಶೆಟ್ಟರಿಗೆ ಇರುವ ಪ್ರಾಧಾನ್ಯತೆಯೇನೂ ಕಡಿಮೆಯಾಗುವುದಿಲ್ಲ, ಅಲ್ಲವೇ?

Leave a Reply

Your email address will not be published.

Social Media Auto Publish Powered By : XYZScripts.com