ಕಂಬಾರರಿಗೊಂದು ಪತ್ರ.. ಕುಂಭಮೇಳ, ಲೈಂಗಿಕತೆ, ಪಿತೃ ಪ್ರಧಾನತೆ ಇತ್ಯಾದಿ..

ಸರ್,

ಸಾಹಿತ್ಯದ ತೀವ್ರ ಓದುಗರಲ್ಲದ, ಸಾಹಿತ್ಯದ ವಿದ್ಯಾರ್ಥಿಗಳೂ ಅಲ್ಲದ ಸಾವಿರಾರು ಜನರ ಅಭಿಪ್ರಾಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಈ ಪತ್ರ ಬರೆಯಲಾಗಿದೆ.
‘ನಾನೇಕೆ ಎಲ್ಲದರಲ್ಲಿ ನುಗ್ಗಬೇಕು?’ ಎಂದು ಸಂವಾದದಲ್ಲಿ ಯಾವು ಹೇಳಿದ ಮಾತಿನಲ್ಲಿ ಪಲಾಯಮವಾದವಂತೂ ಇದ್ದೇ ಇದೆ. ನಿಜ, ಊಟ್ ಅವ್ಯವಸ್ಥೆಯೋ, ಸಂಚಾರದ ಅವ್ಯವಸ್ಥೆಯೋ ಆದರೆ ಅದಕ್ಕೆಲ್ಲ ನೀವು ಉತ್ತರಿಸಬೇಕೆಂದು ಪುಟ್ಟಾಪೂರಾ ಮೂರ್ಖತನವೇ.
ಆದರೆ ಸಂವಾದದಲ್ಲಿ ನಿಮ್ಮ ಕೃತಿಗಳಲ್ಲಿನ ಸ್ತ್ರೀ ಸ್ವಾತಂತ್ರ್ಯದ ಕುರಿತು ತುಂಬ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಭಾರತಿ ಹೆಗಡೆಯವರು ಕುಂಭಮೇಳದ ಕುರಿತು ಎತ್ತಿದ ಪ್ರಶ್ನೆಗೆ ತಾವು ಕಸಾಪ ಅಧ್ಯಕ್ಷ ಮನು ಬಳಗಾರ್ ಅವರ ಕಡೆ ಬೆರಳು ತೋರಿಸಿ ಎಲ್ಲ ಸರಿಯಾಯಿತಲ್ಲ ಎಂದು ಮಾತು ಮೊಟಕುಗೊಳಿಸಿದ್ದು ನಮಗಂತೂ ಸರಿ ಅನಿಸಲಿಲ್ಲ.
ಇದೇ ಸಂವಾದದಲ್ಲಿ ತಾವು, ‘ಹೆಣ್ಣೇ ಈ ಸೃಷ್ಟಿಯ ಪೋಷಕಳು. ಅವಳಲ್ಲಿ ಸಹನೆಯಿದೆ. ಪುರುಷ ಮಾತ್ರ ಅಹಂನಲ್ಲೇ ತನ್ನ ಅಧಿಕಾರ ಚಲಾಯಿಸುತ್ತಾನೆ…’ ಎಂದೆಲ್ಲ ಹೇಳಿದಿರಿ ಸರ್. ಆದರೆ ಸಹನೆಯಿಂದ ಭಾರತಿ ಹೆಗಡೆ ಕುಂಭಮೇಳದ ಬಗ್ಗೆ ಕೇಳಿದ ಪ್ರಶ್ನೆಗೆ ನಿಮ್ಮ ಉತ್ತರ ಅಹಂನಿಂದಲೇ ಕೂಡಿತ್ತಲ್ಲವೇ ಸರ್?
ಬಹುಷ:, ಪಿತೃತ್ವದ ನೆಲೆಯಲ್ಲಿಯೇ ಯೋಚಿಸುವ ನಿಮ್ಮಿಂದ ಕುಂಭಮೇಳಕ್ಕೆ ವಿರೋಧ ಬರಬಹುದೆಂದು ನಿರೀಕ್ಷಿಸುವುದೇ ತಪ್ಪೇನೋ?
ಉದ್ಘಾಟನಾ ಸಮಾರಂಭದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿಮ್ಮನ್ನು ಮತ್ತು ಚಂಪಾರನ್ನು ಉದ್ದೇಶಿಸಿ ನೇರವಾಗಿ ಸವಾಲು ಎಸೆದಾಗ, ತಾವು ಎದ್ದು ನಿಂತು ಉತ್ತರ ಕೊಡಬಹುದಿತ್ತು. ಘೋಡಿಗೇರಿಯ ಬಂಡಾಯದ ಗುಣವೇ ಅದಲ್ಲವೇ? ಈಗ ಬೆಂಗಳೂರಿನ ವಶವಾಗಿರುವ ತಮಗೆ ಅದು ಶಿಷ್ಟಾಚಾರ ಅಲ್ಲ ಅನಿಸಿರಬಹುದು. ಆದರೆ ಅವತ್ತೇ ಸಂಜೆ ಒಂದು ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಎತ್ತಿದ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನು ಕೊಡುವ ಅವಕಾಶವನ್ನು ತಾವು ಕೈ ಬಿಟ್ಟಿದ್ಧೇಕೆ ಸರ್?
ನಿಮ್ಮ ಕೃತಿಗಳಲ್ಲಿ ಲೈಗಿಕತೆಯ ಕುರಿತಾಗಿ ಬರುವ ವಿಷಯಗಳಿಗೆ ಸಂಬಂಧಿಸಿದಂತೆ ಲೇಖಕಿಯೊಬ್ಬರು ಕೇಳಿದ ಪ್ರಶ್ನೆಗೂ ಸಮಂಜಸ ಉತ್ತರವನ್ನೂ ತಾವು ನೀಡಲಿಲ್ಲ. ತಾಸಿನ ಹಿಂದಷ್ಟೇ ತಮ್ಮ ಸಾಹಿತ್ಯದ ಕುರಿತಾಗಿ ಮಾತಾಡಿದ್ದ ವಿಮರ್ಶಕ ಸಿ.ಎನ್ ರಾಮಚಂದ್ರನ್ ವಿಶ್ಲೇಷಿಸಿದಂತೆ, ಅದು ‘ಸೃಜನಶೀಲ ಲೈಂಗಿಕತೆ ಮತ್ತು ಸೃಷ್ಟಿಯ ಸಹಜ ಹಪಾಹಪಿ’ ಅಷೇ ಹೌದೇ?
ಆದರ್ಶ ಗ್ರಾಮವೆಂದು ತಮ್ಮ ಕೃತಿಗಳಲ್ಲಿ ಬರುವ ಶಿವಾಪುರ ಅಂದರೆ ತಮ್ಮೂರು ಘೋಡಿಕೇರಿಯ ಚಿತ್ರಣದಲ್ಲಿ ಪಿತೃ ಪ್ರಧಾನ ಸಂಸ್ಕøತಿಯ ವೈಭವವೇ ಇರುವುದರಿಂದ ತಮಗೆ ಕುಂಭಮೇಳ ಮೆರವಣಿಗೆ ತಪ್ಪೇನಲ್ಲ ಎಂದು ಅನಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಅಲ್ಲವೇ ಸರ್?
ಜಾನಪದೀಯ ನೆಲೆಯಲ್ಲಿ ನಮ್ಮ ನೆಲದ ಸಂಸ್ಕøತಿಯ ಒಂದು ಮುಖವನ್ನು ಅರ್ಥಪೂರ್ಣವಾಗಿ ನೀಡಿರುವ ನೀವು ಈ ಸಮ್ಮೇಳನದ ಸಂದರ್ಭದಲ್ಲಿ ಇನ್ನಷ್ಟು ಜಾಗರೂಕತೆಯಿಂದ ನಿಲುವುಗಳನ್ನು ಸ್ಪಷ್ಟಪಡಿಸಬಹುದಿತ್ತು ಅನಿಸುತ್ತದೆ.
ಏನೇ ಇರಲಿ ಸರ್, ಶಿಕ್ಷಣ ಮಾಧ್ಯಮದ ಕುರಿತಾಗಿ ಈ ಸಮ್ಮೇಳನ ಒಂದು ಚರ್ಚೆಯನ್ನಂತೂ (ತಾವು ನಿರೀಕ್ಷಿಸಿರಲಿಲ್ಲ ಅನಿಸುತ್ತಿದೆ) ಹುಟ್ಟು ಹಾಕಿದೆ. ಅದಕ್ಕಾಗಿ ಈ ಸಮ್ಮೇಳನಕ್ಕೆ ಕನ್ನಡಿಗರೆಲ್ಲರೂ ಆಭಾರಿಗಳಾಗಿದ್ದೇವೆ.
-ಪ್ರೀತಿಯಿಂದ
ಮಲ್ಲನಗೌಡರ್ ಮತ್ತು ಸಹಮನಸ್ಕರು

Leave a Reply

Your email address will not be published.

Social Media Auto Publish Powered By : XYZScripts.com