ನೀರಿಗೆ ವಿಷ ಬೆರೆಸಿದ ಪ್ರಕರಣ : ಮತ್ತೆ ಇಬ್ಬರು ಅಸ್ವಸ್ಥ – ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಆದೇಶ

ಯಾದಗಿರಿ ಜಿಲ್ಲೆ  ಮುದನೂರು ಗ್ರಾಮದಲ್ಲಿ ನೀರಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರು ಸೇವಿಸಿದ ಇಬ್ಬರು ಗ್ರಾಮಸ್ಥರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುರೇಶ್ ಮತ್ತು ತಾಯಮ್ಮ ಎನ್ನುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುದನೂರು ಗ್ರಾಮದಲ್ಲಿ  ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ್ದರಿಂದ ಹಲವರು ಅಸ್ವಸ್ಥರಾಗಿ ಮಹಿಳೆಯೊಬ್ಬರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವಿವರ ಪಡೆದಿದ್ದು ಕೂಡಲೇ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ. ಈ ಪ್ರಕರಣದ  ಬಗ್ಗೆ ತ್ವರಿತವಾಗಿ ತನಿಖೆ ನಡೆಸಿ ಇಂತಹ ದುಷ್ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದು ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಗ್ರಾಮದ ನಿವಾಸಿ ಹೊನಮ್ಮ (60) ಅವರನ್ನು ತಕ್ಷನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರಕ್ತ ವಾಂತಿ ಮಾಡಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ಬೆಳಗ್ಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.

ಮುದನೂರು ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿಂದ ತಾಲೂಕಿನ ಶಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತದೆ.

 

Leave a Reply

Your email address will not be published.