‘ಆತ್ಮಹತ್ಯೆಯಂತಹ ಕೃತ್ಯಗಳಿಗೆ ಪ್ರಯತ್ನಿಸುವವರು ನನ್ನ ಅಭಿಮಾನಿಗಳಲ್ಲ’ : ಬೇಸರ ವ್ಯಕ್ತಪಡಿಸಿದ ಯಶ್

ಯಶ್ ಹುಟ್ಟುಹಬ್ಬದ ದಿನ ಅವರನ್ನು ನೋಡಲು ಆಗಲಿಲ್ಲ ಎಂಬ ನೋವಿನಿಂದ ಮಂಗಳವಾರ ಯಶ್ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅವರ ಅಭಿಮಾನಿ ರವಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ರವಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ ಕೊನೆಯುಸಿರೆಳೆದರು.

ಹಿರಿಯ ನಟ ಅಂಬರೀಷ್ ಅವರ ನಿಧನದ ನೋವಿನಲ್ಲಿ ಇರುವುದರಿಂದ ಯಶ್ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಆದರೂ, ಯಶ್ ಅವರನ್ನು ನೋಡಲು ಅಭಿಮಾನಿಗಳು ಅವರ ಮನೆ ಮುಂದೆ ಮಂಗಳವಾರ ಜಮಾಯಿಸಿದ್ದರು. ಯಶ್ ಅವರನ್ನು ನೋಡಲು ಸಾಧ್ಯವಾಗದೆ ಇದ್ದಿದ್ದರಿಂದ ಅವರ ಅಭಿಮಾನಿ ರವಿ ಬೇಸರದಿಂದ ಅಲ್ಲಿಯೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಂಕಿಯ ಜ್ವಾಲೆ ಏಕಾಏಕಿ ಆವರಿಸಿದ್ದರಿಂದ ರವಿಯ ದೇಹ ಶೇ 80ರಷ್ಟು ಸುಟ್ಟು ಹೋಗಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದರಿಂದ ಅವರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಪ್ರಜೆಗಳಾಗಿ ನಾವು ಕಾನೂನಿಗೆ ತಲೆ ಬಾಗಬೇಕು : ಯಶ್ ಅಭಿಮಾನಿಯ ಆತ್ಮಹತ್ಯೆಯ ಸುದ್ದಿ ತಿಳಿದ ಯಶ್, ಸಂಜೆ ಆಸ್ಪತ್ರೆಗೆ ತೆರಳಿ ರವಿ ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಿದ್ದರು. ಯಾವ ಅಭಿಮಾನಿಯೂ ಈ ರೀತಿ ಆತ್ಮಹತ್ಯೆಯ ಪ್ರಯತ್ನ ಮಾಡಿಕೊಳ್ಳಬಾರದು. ಇಂತಹ ಕೃತ್ಯಗಳಿಗೆ ಮುಂದಾಗುವವರು ನನ್ನ ಅಭಿಮಾನಿಗಳಲ್ಲ ಎಂದು ಯಶ್ ಹೇಳಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com