ಮುಸ್ಲಿಮೇತರ ವಲಸಿಗರಿಗೆ ಪೌರತ್ವ – ವಿಪಕ್ಷಗಳ ವಿರೋಧದ ಮಧ್ಯೆ ವಿವಾದಿತ ಮಸೂದೆಗೆ ಲೋಕಸಭೆ ಅಂಗೀಕಾರ

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ವಿವಾದಿತ ಪೌರತ್ವ (ತಿದ್ದುಪಡಿ) ಮಸೂದೆ, 2016 ಅನ್ನು ವಿರೋಧ ಪಕ್ಷಗಳ ಭಾರೀ ವಿರೋಧದ ಮಧ್ಯೆ ಲೋಕಸಭೆ ಅಂಗೀಕರಿಸಿದೆ.

ಈ ವಿಷಯದ ಸಂಬಂಧ ಅಸ್ಸಾಂ ಸಹಿತ ಈಶಾನ್ಯ ರಾಜ್ಯಗಳಲ್ಲಿ ಭಾರೀ ಆಕ್ರೋಶ ಭುಗಿಲೇಳಲು ಕಾರಣವಾಗಿದ್ದು, ಬಿಜೆಪಿಯ ಮಿತ್ರಪಕ್ಷ ಅಸ್ಸಾಂ ಗಣ ಪರಿಷತ್ ಇದೇ ಕಾರಣಕ್ಕೆ ಮೈತ್ರಿ ಕಡಿದುಕೊಂಡು ಸರ್ಬಾನಂದ ಸೋನೋವಾಲ್ ಸರ್ಕಾರದಿಂದ ಹೊರನಡೆದಿದೆ.

ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತದ ಪೌರತ್ವ ನೀಡುವ ಮೂಲಕ ಮೂರು ದೇಶಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳು, ಜೈನರು, ಕ್ರಿಶ್ಚಿಯನ್ನರು, ಬೌದ್ಧರು ಹಾಗೂ ಪಾರ್ಸಿಗಳ ಹಿತವನ್ನು ಈ ಮಸೂದೆ ಕಾಪಾಡಲಿದೆ. ಅವರಿಗೆ ಭಾರತ ಬಿಟ್ಟು ತೆರಳಲು ಬೇರೆ ಸ್ಥಳವಿಲ್ಲ. ನೆಹರು ಸಹಿತ ಅನೇಕ ನಾಯಕರು ನೆರೆಯ ದೇಶಗಳ ನಿರಾಶ್ರಿತ ಅಲ್ಪಸಂಖ್ಯಾತರಿಗೆ ಆಶ್ರಯ ನೀಡಲು ಬೆಂಬಲ ನೀಡಿದ್ದರು ಎಂದು ಹೇಳಿದರು.
ಇದೇ ವೇಳೆ ಅಸ್ಸಾಂನಲ್ಲಿ ಈ ಮಸೂದೆ ವಿರೋಧಿಸಿ 11 ಗಂಟೆಗಳ ಬಂದ್ ನಡೆಸಲಾಯಿತು.

ಈ ವಿಚಾರದಲ್ಲಿ ರಾಜಕೀಯವಾಗಿ ಬಿಜೆಪಿ ಮೂಲೆಗುಂಪಾಗಿದೆ. ಎಜಿಪಿ ಮೈತ್ರಿ ಕಡಿದುಕೊಂಡರೆ, ಶಿವಸೇನೆ ಹಾಗೂ ಜೆಡಿಯು ಈ ಮಸೂದೆಯನ್ನು ವಿರೋಧಿಸಿದವು. ಮಿಜೋರಾಂ ಹಾಗೂ ಮೇಘಾಲಯ ಸರ್ಕಾರಗಳು ಸಂಪುಟ ಸಭೆ ನಡೆಸಿ ಈ ಮಸೂದೆಯನ್ನು ವಿರೋಧಿಸುವ ನಿರ್ಣಯ ಕೈಗೊಂಡವು.

Leave a Reply

Your email address will not be published.

Social Media Auto Publish Powered By : XYZScripts.com