ಬಿಜೆಪಿಗೆ ತಲೆನೋವಾಗಲಿದೆ ಉತ್ತರಪ್ರದೇಶ, ಬಿಹಾರದಲ್ಲಿ ನಿಶದ್ ರಾಜಕೀಯದ ಹೊಸ ಆಟ

ಪೂರ್ವ ಉತ್ತರಪ್ರದೇಶ ಹಾಗೂ ಪಶ್ಚಿಮ ಬಿಹಾರದ ಗಡಿ ಪ್ರದೇಶಗಳನ್ನೊಳಗೊಂಡ ಪೂರ್ವಾಂಚಲ ಪ್ರದೇಶದಲ್ಲಿ ಮೀನುಗಾರರು ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.
ಜಾಟರು, ಯಾದವರು ಹಾಗೂ ಕುರ್ಮಿ-ಪಟೇಲರಂತೆಯೇ ನಿಶದರು (ಮೀನುಗಾರರ ದೊಡ್ಡ ಉಪ ಸಮುದಾಯ) ತಮ್ಮ ಧ್ವನಿ ಕಂಡುಕೊಳ್ಳಲು ಹಾಗೂ ಪಕ್ಷಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಕಾಣಲು ಬಯಸುತ್ತಿದ್ದಾರೆ. ನಿಶದರ ರಾಜಕೀಯವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಹೆಚ್ಚಿನ ಅಪಾಯ ತರುವ ಸಾಧ್ಯತೆಗಳಿವೆ.
ಬಿಹಾರದಲ್ಲಿ, ಮಲ್ಲಾನ ಮಗ ಎಂದೇ ಪ್ರಸಿದ್ಧರಾಗಿರುವ ಮುಖೇಶ್ ಸಹಾನಿ ಅವರು ತಮ್ಮ ಪಕ್ಷ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ)ಯೊಂದಿಗೆ ನಿಶದ್ ರಾಜಕೀಯದ ಮುನ್ನೆಲೆಯಲ್ಲಿದ್ದಾರೆ. ಉತ್ತರಪ್ರದೇಶದಲ್ಲಿ ಇನ್ನೊಂದು ನಿಶದ್ ಎಂಬ ಹೆಸರಿನ ಪಕ್ಷವು ತ್ವರಿತ ಬೆಳವಣಿಗೆ ಕಾಣುತ್ತಿದೆ.

ಈ ಪಕ್ಷದ ಸಂಸ್ಥಾಪಕ ಸಂಜಯ್ ನಿಶದ್ ಅವರು ತಮ್ಮ ತಮ್ಮ ಜಾತಿಯ ಹೆಸರನ್ನೇ ಪಕ್ಷದ ಹೆಸರಾಗಿ ನೋಂದಾಯಿಸಲು ಬಯಸಿದ್ದರು. ಆದರೆ ಚುನಾವಣಾ ಆಯೋಗ ತಿರಸ್ಕರಿಸಿತ್ತು. ಬುದ್ಧಿವಂತಿಕೆಯಿಂದ ಸಂಜಯ್ ಅವರು ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಲ್ ಅಥವಾ ನಿಶದ್ ಎಂಬುದಾಗಿ ಪಕ್ಷದ ಹೆಸರನ್ನು ನೋಂದಾಯಿಸಿದರು.

ಕಳೆದ ಮಾರ್ಚ್‌ನಲ್ಲಿ ನಡೆದ ಗೋರಖ್‌ಪುರ ಸಂಸತ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನ ಬಳಿಕ ಸಂಜಯ್ ನಿಶದ್‌ರ ಪುತ್ರ ಪ್ರವೀಣ್ ಪ್ರಾಮುಖ್ಯತೆ ಪಡೆಯತೊಡಗಿದ್ದಾರೆ. ಪ್ರವೀಣ್ ಅವರು ಸಮಾಜವಾದಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿದ್ದರು. ತಂದೆಯ ನಿಶದ್ ಪಾರ್ಟಿ, ಬಿಎಸ್‌ಪಿ ಹಾಗೂ ಇತರೆ ಸಣ್ಣ ಪಕ್ಷಗಳು ಬೆಂಬಲ ನೀಡಿದ್ದವು. ಪರಿಣಾಮ, 29 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರದಲ್ಲಿ ಪ್ರವೀಣ್ ಗೆಲುವು ಸಾಧಿಸಿದ್ದರು.

ಇದೇ ನಿಶದ್ ಪಕ್ಷ ಕಳೆದ ಡಿಸೆಂಬರ್ 30ರಂದು ಗಾಜಿಪುರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ರೂವಾರಿಯಾಗಿತ್ತು. ಆ ಹಿಂಸಾಚಾರದಲ್ಲಿ ಪೊಲೀಸ್ ಪೇದೆಯೊಬ್ಬ ಸಾವನ್ನಪ್ಪಿದ್ದ. ಮೀಸಲಾತಿಗಾಗಿ ಆಗ್ರಹಿಸಿ ಈಗ ರಾಜ್ಯಾದ್ಯಂತ ಈ ಪಕ್ಷ ಪ್ರತಿಭಟನೆ ನಡೆಸುತ್ತಿದೆ. ಮೀಸಲಾತಿಯು ನಿಶದ್ ರಾಜಕೀಯದ ಪ್ರಮುಖ ಅಸ್ತ್ರವಾಗಿದೆ.

ಬಿಹಾರ ಹಾಗೂ ಉತ್ತರಪ್ರದೇಶಗಳಲ್ಲಿ ನಿಶದ್ ಸಮುದಾಯದ ಜನಸಂಖ್ಯೆ ಕ್ರಮವಾಗಿ ಶೇ.14 ಹಾಗೂ ಶೇ.17ರಷ್ಟಿದೆ. ಬಿಹಾರದ ಗಂಗಾ ಹಾಗೂ ನಾರಾಯಣಿ ನದಿಗಳು ಹಾಗೂ ಉತ್ತರಪ್ರದೇಶದಲ್ಲಿ ಗಂಗಾ, ಘಾಘ್ರಾ, ರಪ್ತಿ, ಗಂಡಕ ಹಾಗೂ ಯಮುನಾ ನದಿಗಳ ದಂಡೆಯ ಮೇಲೆ ನಿಶದ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ಬಿಹಾರದಲ್ಲಿ ಇತರೆ ಹಿಂದುಳಿದ ಸಮುದಾಯ (ಒಬಿಸಿ)ದಲ್ಲಿದ್ದ ನಿಶದ್ ಬುಡಕಟ್ಟನ್ನು ನಿತೀಶ್ ಕುಮಾರ್, ತೀರಾ ಹಿಂದುಳಿದ ಸಮುದಾಯ (ಇಬಿಸಿ) ವಿಭಾಗಕ್ಕೆ ಸೇರಿಸಿದ್ದರು. ಇದೀಗ ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂ ನಿತೀಶ್ ಶಿಫಾರಸು ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com