2018ರಲ್ಲಿ ಭಾರತದಲ್ಲಿ 1 ಕೋಟಿ ಉದ್ಯೋಗ ನಷ್ಟ: ಕಾಂಗ್ರೆಸ್ ಟೀಕೆ

ಉದ್ಯೋಗ ಹೆಚ್ಚುತ್ತಿದೆ ಎಂಬುದಾಗಿ ಹೇಳಿಕೊಂಡಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಕಳೆದ ವರ್ಷ ಒಂದು ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಚಿಂತಕರ ಚಾವಡಿಯೊಂದು ನೀಡಿರುವ ವರದಿಯನ್ನು ಉಲ್ಲೇಖಿಸಿದೆ.
ಭಾರತೀಯ ಆರ್ಥಿಕತೆಯ ನಿಗಾದ ಚಿಂತಕರ ಚಾವಡಿ ಕೇಂದ್ರ (ಸಿಎಂಐಇ) ನೀಡಿರುವ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರ ಮನಿಶ್ ತಿವಾರಿ, ಬಿಜೆಪಿ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಒದಗಿಸುವ ತನ್ನ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ವಿಪರ್ಯಾಸವೆಂದರೆ, ದೇಶದಲ್ಲಿ ಒಂದು ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಟೀಕಿಸಿದರು.
“2014ರ ಚುನಾವಣೆಯ ವೇಳೆ, ಪ್ರಧಾನಿ ಮೋದಿ ಅಚ್ಚೇ ದಿನ್‌ನ ಭರವಸೆ ನೀಡಿದ್ದರು. ಐದು ವರ್ಷಗಳಲ್ಲಿ ಒಟ್ಟು 10 ಕೋಟಿ ಉದ್ಯೋಗ ಸೃಷ್ಟಿಯ ಮಾತನ್ನಾಡಿದ್ದರು. ಆದರೆ ಇತ್ತೀಚೆಗೆ ಪ್ರತಿಷ್ಠಿತ ಚಿಂತಕರ ಚಾವಡಿಯಾದ ಸಿಎಂಐಇ ಬಿಡುಗಡೆಗೊಳಿಸಿರುವ ವರದಿಯಲ್ಲಿ ಹೇಳಲಾಗಿರುವ ಉದ್ಯೋಗ ಕಳೆದುಕೊಂಡಿರುವ ವಾಸ್ತವ ಸಂಗತಿಯ ವರದಿ ಇದೆ” ಎಂದರು.
ಆ ವರದಿಯ ಪ್ರಕಾರ, ಡಿಸೆಂಬರ್ 2017ರ ವೇಳೆಗೆ 40.79 ಕೋಟಿ ಜನರು ಉದ್ಯೋಗಿಗಳಾಗಿದ್ದರು. 2018ರಲ್ಲಿ ಇದು 39.07 ಕೋಟಿ ಗೆ ಇಳಿದಿದೆ. ಅಂದರೆ, ಒಂದು ಕೋಟಿಯಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡವರಲ್ಲಿ ಶೇ.80ರಷ್ಟು ಮಂದಿ ಮಹಿಳೆಯರು ಹಾಗೂ ಶೇ.90ರಷ್ಟು ಮಂದಿ ಗ್ರಾಮೀಣ ಭಾಗದವರಾಗಿದ್ದಾರೆ” ಎಂದು ತಿವಾರಿ ಆ ವರದಿಯ ವಿವರವನ್ನು ಒದಗಿಸಿದ್ದಾರೆ.
ಭಾರತದ ನಿರುದ್ಯೋಗ ದರವು 2018ರ ಡಿಸೆಂಬರ್‌ನಲ್ಲಿ ಶೇ.7.4ಕ್ಕೆ ಏರಿದೆ. ಇದು ದಶಕದಲ್ಲೇ ಅತ್ಯಧಿಕವಾಗಿದೆ. ದಿನಗೂಲಿ ನೌಕರರು ಹಾಗೂ ಸಣ್ಣ ಉದ್ದಿಮೆಗಳು ಅತಿಹೆಚ್ಚು ನಷ್ಟ ಅನುಭವಿಸಿದ್ದಾರೆ. ಅಪನದೀಕರಣ ವೇಳೆಯಲ್ಲೂ ಇವರೇ ನಷ್ಟ ಅನುಭವಿಸಿದ್ದರು ಎಂದೂ ತಿವಾರಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com