ಮೊಳಗಿತು ಕನ್ನಡದ ಕಹಳೆ : ೮೪ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರ್ಣರಂಜಿತ ಚಾಲನೆ

ಅಖಿಲ ಭಾರತ ೮೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಘಟ್ಟ ಮೆರವಣಿಗೆಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ಅದ್ದೂರಿ ಚಾಲನೆ ದೊರೆಯಿತು.

ಕೆಸಿಡಿ ಆವರಣದ ಸಂಸ್ಥಾಪಕರಾದ ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಹಾಗೂ ರೊದ್ದ ಶ್ರೀನಿವಾಸ ರಾಯರ ಪುತ್ಥಳಿಗಳಿಗೆ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ,ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಕಸಾಪ ಅಧ್ಯಕ್ಷ ಮನು ಬಳಿಗಾರ,ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ,ಶಾಸಕರಾದ ಶ್ರೀನಿವಾಸ ಮಾನೆ,ಅಮೃತ ದೇಸಾಯಿ ಮಾಲಾರ್ಪಣೆ ಮಾಡಿ ಗೌರವಿಸಿದರು.

ನಂತರ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸತ್ಯಭಾಮಾ ಕಂಬಾರ ದಂಪತಿಗಳು ಹಾಗೂ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರನ್ನು ಗೌರವಪೂರ್ವಕವಾಗಿ ಆಸೀನರನ್ನಾಗಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ರೋಮಾಂಚನಗೊಳಿಸಿದ ಕಹಳೆಗಳ ನಾದ: ಮೆರವಣಿಗೆ ಆರಂಭವಾಗುತ್ತಿದ್ದಂತೆ ಏಕಕಾಲದಲ್ಲಿ ಮೊಳಗಿದ ೨೫ ಕ್ಕೂ ಹೆಚ್ಚು ಕಹಳೆಗಳ ನಾದ ನೆರದ ಸಹಸ್ರಾರು ಕನ್ನಡಿಗರ ಅಭಿಮಾನವನ್ನು ಬಡಿದೆಬ್ಬಿಸಿತು.
ಬಾನೆತ್ತರದಲ್ಲಿ ಹಾರಾಡಿದ ಕನ್ನಡ ಧ್ವಜ ಸಂಕೇತಿಸುವ ಬಲೂನುಗಳು ಚಿತ್ತಾರ ಮೂಡಿಸಿದವು.ಪೂರ್ಣ ಕುಂಭಹೊತ್ತ ಮಹಿಳೆಯರು, ಡೊಳ್ಳು, ಸೋಮನ ಕುಣಿತ,ವೀರಗಾಸೆ,ಜಗ್ಗಲಿಗೆ,ಕೋಲಾಡ,ಗೊಂಬೆ ಕುಣಿತ,ನಗಾರಿ ಮತ್ತಿತರ ೬೦ ಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳ ಅನಾವರಣ ವಿದ್ಯಾನಗರಿಯ ರಸ್ತೆಗಳಲ್ಲಿ ಕನ್ನಡದ ಘೋಷವನ್ನು ಸಾರುತ್ತಿವೆ.

ಬೆಳಿಗ್ಗೆ ಸರಿಯಾಗಿ ೮ ಗಂಟೆಗೆ ಕಂದಾಯ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆ ಅವರು ರಾಷ್ಟ್ರ ಧ್ವಜ , ರಾಜ್ಯ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಪರಿಷತ್ ಧ್ವಜ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನಾಡಧ್ವಜ ಆರೋಹಣ ಮಾಡಿದರು.


ಜಿಲ್ಲಾಧಿಕಾರಿ ದೀಪಾ ಚೋಳನ್ ,ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಮಹಾನಗರಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಮತ್ತಿತರರು ಇದ್ದರು.

Leave a Reply

Your email address will not be published.

Social Media Auto Publish Powered By : XYZScripts.com