ಕಪಟ ಕಾವಿ ಕಾಳಗದಲ್ಲಿ ಹವ್ಯಕರ ಮಾನ ಹರಾಜು!! ರಾಘು ಸ್ವಾಮಿಯ ಅಪ್ರಕಟಿತ ಅಸಹ್ಯ ಪುರಾಣ

ಹವ್ಯಕ ಬ್ರಾಹ್ಮಣರು ಬುದ್ಧಿವಂತರಾ? ಇಂಥದೊಂದು ಅನುಮಾನ-ಜಿಜ್ಞಾಸೆ ಶುರುವಾಗಿ ನಾಲ್ಕೈದು ವರ್ಷವೇ ಕಳೆದು ಹೋಗಿದೆ. ಈ “ಪ್ರತಿಭಾನ್ವಿತ” ಹೈಗರಿಗೆ ಹೊಸನಗರದ ರಾಮಚಂದ್ರಾಪುರ ಮಠವಿದೆಯಲ್ಲ, ಅದು ಗುರು ಮಠ. ಸದ್ರಿ ಮಠದ ಪೀಠಕ್ಕೆ ಫೆವಿಕಲ್ ಹಾಕಿ ಕೂತಿರುವ ರಾಘು ಸ್ವಾಮಿ ಮೇಲೆ ಒಂದಲ್ಲ, ಎರಡೆರಡು ಅತ್ಯಾಚಾರದ ಕೇಸುಗಳಿವೆ; ಪಾಪದ ಹೈಗರ ಕೂಸೊಬ್ಬಳ ಅಪಹರಣ, ಸ್ವಜಾತಿ ಸಧ್ಗøಸ್ಥನ ಆತ್ಮಹತ್ಯೆಗೆ ಕಾರಣನಾದ ಅನಾಚಾರ ಪ್ರಕರಣಗಳಿವೆ! ಒಂದು ನ್ಯಾಯಾಲಯವಂತೂ ರಾಘು ಸ್ತ್ರೀ ಸಖ್ಯಾಸುಖ ಸಂತೃಪ್ತ ಸನ್ಯಾಸಿ ಎಂತಲೇ ವ್ಯಾಖ್ಯಾನಿಸಿದೆ!! ರಾಘುನ ಅಪ್ರಕಟಿತ ಅಸಹ್ಯ ಪುರಾಣ ಅಸಂಖ್ಯಾ. ಇಡೀ ಜಗತ್ತೇ ಈ ಕಾವಿ ಜೀವಿಯ ರಾಸಲೀಲಾ ವಿನೋದದ ಕತೆಗಳ ಕೇಳಿ ಕ್ಯಾಕರಿಸುತ್ತಿದೆ. ಆದರೆ ಅದ್ಯಾಕೋ ವಿಚಾರವಂತರೆಂಬ ಹೆಗ್ಗಳಿಕೆಯ ಹವ್ಯಕರಿಗೆ ಗುರುವಿನ ಗಂಡಾಗುಂಡಿ ಅರ್ಥವೇ ಆಗುತ್ತಿಲ್ಲ!!
ಎಂಥವರನ್ನಾದರೂ ಯಾಮಾರಿಸಿ ಕಾರ್ಯಸಾಧಿಸಬಲ್ಲ ರಾಘು ಹಿಂಜರಿಕೆ ಸ್ವಭಾವದ ಹೈಗರನ್ನು ಬಿಟ್ಟಾನಾ? ಶಿಷ್ಯ ಕೋಟಿಗೆ ಮುಷ್ಠಿ-ಮುಷ್ಠಿ ಮಂಕುಬೂದಿ ಎರಚುತ್ತ “ಅಧ್ಯಾತ್ಮಿಕ” ದರ್ಬಾರು ನಡೆಸಿಕೊಂಡಿದ್ದಾನೆ. ಯಾವ ಅಪಮಾನ, ಅಪರಾಧ, ಅಪಜಯಕ್ಕೂ ನಾಚಿಕೆ ಪಡದೆ ಸುಬಗನ ಪೋಸು ಕೊಡುವ ರಾಘು, ಹವ್ಯಕರ ಯೋಚನಾ ಶಕ್ತಿಯನ್ನೇ ಕುಂದಿಸಿಬಿಟ್ಟಿದ್ದಾನೆ. ಗುರುಶಾಪ, ಬಹಿಷ್ಕಾರದಂಥ ಬೆದರಿಕೆಗೆ ಕಂಗಾಲಾಗಿರುವ ಹೈಗರು ಗುರುವಿನ ಕಪಟ ನಾಟಕ ಕಂಡೂಕಾಣದಂತೆ ಬೋಪರಾಕ್ ಹಾಕುತ್ತಿದ್ದಾರೆ, ಪಾಪ!
ರಾಘುಗೆ ಅಂಟಿಕೊಂಡಂಥ ಕಳಂಕ ಬೇರೆ ಯಾವುದೇ ಜಾತಿಯ ಮಠಾಧಿಪತಿಗೆ ತಟ್ಟಿದ್ದರೆ ಆ ಕ್ಷಣವೇ ಶಿಷ್ಯರೆಲ್ಲ ಸೇರಿ ಪೀಠದಿಂದ ಇಳಿಸದೇ ಬಿಡುತ್ತಿರಲಿಲ್ಲ. ಕೊಂಕಣಿಗರ ಪರ್ತಗಾಳಿ ಮಠದ ಕಿರಿಯ ಸನ್ಯಾಸಿಯೊಬ್ಬ ಹೆಂಗಸರಿಗೆ ಮೊಬೈಲ್ ಮೆಸೇಜ್ ರವಾನಿಸುತ್ತಿದ್ದನೆಂಬ ಒಂದೇ ಕಾರಣಕ್ಕೆ ಸದ್ದುಗದ್ದಲ ಮಾಡದೆ ಆತನಿಗೊಂದಿಷ್ಟು ಪರಿಹಾರ ಕೊಟ್ಟು ಮನೆಗೆ ಕಳಿಸಿ ಸಮಾಜದ ಮಾನ ಉಳಿಸಿಕೊಂಡ ನಿದರ್ಶನವೂ ಇದೆ.
ಆದರೆ ಹವ್ಯಕರ ಬುದ್ದಿಗೇಕೆ ಮಂಕು ಕವಿದಿದೆ? ಹವ್ಯಕ ಸಮಾಜವನ್ನು ನಗೆಪಾಟಲಿಗೀಡು ಮಾಡಿರುವ ಪತಿತನನ್ನು ಇವತ್ತಿಗೂ ಗುರುವೆಂದು ಮೆರೆಸುತ್ತಿರುವುದರ ಹಕೀಕತ್ತೇನು? ಇದು ಈ ಶತಮಾನದ ಅಚ್ಚರಿ!!
ಹತ್ತು ತಿಂಗಳ ಹಿಂದೆ ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮಿ ಹಿರಿತನದಲ್ಲಿ ಸಭೆ ಸೇರಿದ್ದ ಶಂಕರಾಚಾರ್ಯ ಪರಂಪರೆ ಸಂತರ ಸನಾತನ ಧರ್ಮ ಸಂವರ್ಧಿನಿ ಸಭಾ ಯತಿಧರ್ಮಕ್ಕೆ ವ್ಯತಿರಿಕ್ತವಾಗಿ ತಾರ್ಕಿಕ ಜೀವವಾನಂದ ಅನುಭವಿಸುತ್ತಿರುವ ರಾಘುಗೆ ಬಹಿಷ್ಕಾರ ಹಾಕಿತ್ತು. ಅತ್ಯಾಚಾರ, ಅನೈತಿಕ ಸಂಬಂಧ, ಬುರ್ನಾಸ್ ಅಪವಾದಗಳ ರಾಘುನ ಪೀಠದಿಂದ ಉಚ್ಛಾಟಿಸುವಂತೆ ಹವ್ಯಕರಿಗೆ ಸಲಹೆಕೊಟ್ಟಿತ್ತು. ರಾಮಚಂದ್ರಾಪುರ ಮಠದ ಅನುಯಾಯಿಗಳು ನಿಷ್ಕಳಂಕಿತ ವ್ಯಕ್ತಿಯೊಬ್ಬನಿಗೆ ಪೀಠಾಧಿಪತಿ ದೀಕ್ಷೆ ಕೊಡುವುದು ಉಚಿತವೆಂದು ಅಭಿಪ್ರಾಯಪಟ್ಟಿತ್ತು.
ಇಷ್ಟಾದರೂ ಹೆಚ್ಚಿನ ಹವ್ಯಕರು ಎಚ್ಚೆತ್ತುಕೊಳ್ಳಲೇ ಇಲ್ಲ. ಆದರೆ ರಾಘುನ ರಾಡಿಯಿಂದ ಹೇಸಿಹೋಗಿರುವ ಹವ್ಯಕರ ಒಂದು ವರ್ಗ ಮಾತ್ರ ಮಠದ ಶುದ್ಧೀಕರಣ ಆಗಲೇಬೇಕೆಂದು ಬೊಬ್ಬೆ ಹೊಡೆಯಿತು. ಮೂರೂ ಬಿಟ್ಟ ರಾಘು ಇದನ್ನು ಕೇರ್ ಮಾಡಲಿಲ್ಲ; ಯಥಾಪ್ರಕಾರ ತಾನು ನಿರಪರಾಧಿಯೆಂದು ವರಾತ ತೆಗೆದ; ತನ್ನ ಜಾತಕ ಜಾಲಾಡಿದವರ ಸಾಮ-ಭೇದ-ದಂಡದಿಂದ ಪಳಗಿಸಲು ನೋಡಿದ; ಸಂವರ್ಧನಿ ಸಭಾದ ಸಂತರ ನಿರ್ಣಯ ಧಿಕ್ಕರಿಸಿ ಸೊಕ್ಕು ತೋರಿಸಿದ. ತನ್ನ ಗುಲಾಮರೇ ತುಂಬಿಕೊಂಡಿರುವ ಅಖಿಲ ಹವ್ಯಕ ಮಹಾಸಭಾದ ಸ್ವಾಭಿಮಾನ ಶೂನ್ಯರನ್ನು ಶೃಂಗೇರಿ ಸ್ವಾಮಿ, ಸ್ವರ್ಣವಲ್ಲಿ ಸ್ವಾಮಿ ಬಳಗದ ವಿರುದ್ಧ ಛೂಬಿಟ್ಟ! ಈ ಮಠಾವಲಂಬಿಗಳು ಹಿಂದೆ-ಮುಂದೆ ನೋಡದೆ ರಾಘುನ ಪರ ವಕಾಲತ್ತಿಗೆ ನಿಂತರು. ಶೃಂಗೇರಿ ಸ್ವಾಮಿ-ಸ್ವರ್ಣವಲ್ಲಿ ಸ್ವಾಮಿಗಳ ಸಂತರ ತಂಡದ ನಿರ್ಣಯವನ್ನು ರಾಘು ನಿರ್ದೇಶನದ ಅಖಿಲ ಹವ್ಯಕ ಮಹಾಸಭಾ ಖಂಡಿಸಿ ಕೇಕೆ ಹಾಕಿತು. ಈ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಎಂಬಾತ ದಾರಿ ತಪ್ಪಿದ ಗುರುಗಳ ಕೊಂಡಾಡಿ ಕುಣಿದು ಧನ್ಯನಾದದ್ದು ತಮಾಷೆಯಾಗಿದೆ.
ಕಳೆದ ವಾರ ಇದೇ ಗಿರಿಧರ ಕಜೆ, ಕಂಗಾಲಾಗಿರುವ ರಾಘುನ ಕಳಾವೃದ್ಧಿಗೆ ವಿಶ್ವ ಹವ್ಯಕ ಸಮ್ಮೇಳನವೆಂಬ ಮೂರು ದಿನದ ತರಹೇವಾರಿ ಜಾತ್ರೆ ಮಾಡಿ ಮುಗಿಸಿದ್ದಾರೆ. ಇನ್ನೇನು ರಾಘುನ ವಿವಿಧ ವಿನೋದಾವಳಿ ಕಾರ್ಯಕ್ರಮಕ್ಕೆ ಮೂರ್ನಾಲ್ಕು ದಿನವಷ್ಟೇ ಇದೆಯೆನ್ನುವಾಗ ಶಿರಸಿ ಸೀಮೆಯ ಹವ್ಯಕರ ಸ್ವರ್ಣವಲ್ಲಿ ಮಠದ ಪೀಠಾಧಿಪತಿಯೂ, ರಾಘುನ ಪ್ರತಿಸ್ಪರ್ಧಿ ಕವಿ ಪಟವೂ ಆಗಿರುವ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಮತ್ತೀತನ ಶಿಷ್ಯ ಸಂಕುಲ ಮುರಕೊಂಡು ಬಿತ್ತು. ರಾಘುನ ಏಜೆಂಟ್ ಗಿರಿಧರ ಕಜೆಯ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಸ್ವಾಮಿ ಇರುತ್ತಾರೆಂದು ಪ್ರಕಟಿಸಲಾಗಿತ್ತು. ಇದನ್ನು ಕೇಳಿದ್ದೇ ತಡ, ಸ್ವರ್ಣವಲ್ಲಿ ಸ್ವಾಮಿಗೆ ಪಿತ್ಥ ನೆತ್ತಿಗೇರಿ ಬಿಟ್ಟಿತು!
ಮೊದಲು ತನ್ನ ಶಿಷ್ಯರನ್ನು ಆಖಾಡಕ್ಕೆ ಬಿಟ್ಟ ಸ್ವರ್ಣವಲ್ಲಿ ಸಂತ ಎರಡನೇ ಸೀನ್‍ನಲ್ಲಿ ಖುದ್ದು ತಾನೇ ರಂಗಕ್ಕೆ ಬಂದು ರಾಘುನ ಮೇಲಿರುವ ಕೋಪ-ತಾಪ ಪ್ರದರ್ಶಿಸಿದರು. ರಾಘುನ ಸಮ್ಮೇಳನದಿಂದ ದೂರವಿಡಬೇಕು; ಸಂತರ ಸಂವರ್ಧಿನಿ ನಿರ್ಣಯ ಖಂಡಿಸಿದ್ದ ಹವ್ಯಕ ಮಹಾಸಭಾ ಕ್ಷಮೆ ಕೇಳಬೇಕು; ಆಗಷ್ಟೇ ನಮ್ಮ ಗುರುಗಳು ಜಾತ್ರೆಗೆ ಬರ್ತಾರೆಂದು ಸ್ವರ್ಣವಲ್ಲಿ ಶಿಷ್ಯರು ಹೇಳಿಕೆ ಒಗಾಯಿಸಿದರು. ಇದು ಶಿಷ್ಯರ ಬಾಯಿಂದ ಬಂದ ಗುರುವಿನ ಮನದಿಂಗಿತವಾಗಿತ್ತು. ಮರುದಿನ ಸ್ವರ್ಣವಲ್ಲಿ ಸ್ವಾಮಿ ಪತ್ರಕರ್ತರೆದುರು ಪ್ರತ್ಯಕ್ಷರಾಗಿ ಶಿಷ್ಯರನ್ನು ಸಮರ್ಥಿಸಿಕೊಂಡರು. ಜತೆಗೆ ರಾಘು ಹಿಡಿತದ ಹವ್ಯಕ ಮಹಾಸಭಾದ ಕಾರ್ಯವೈಖರಿ ತರಾಟೆಗೆ ತೆಗೆದುಕೊಂಡರು.
ಹವ್ಯಕ ಮಹಾಸಭಾವು ಸ್ವರ್ಣವಲ್ಲಿ ಮಠವನ್ನು ಲಾಗಾಯ್ತಿನಿಂದಲೂ ಅಗೌರವದಿಂದ ಕಾಣುತ್ತಿದೆ, ತಾರತಮ್ಯ ಮಾಡುತ್ತಿದೆ, ಇದರಿಂದ ನನ್ನ ಶಿಷ್ಯ ಗಣಕ್ಕೆ ಬೇಸರವಾಗಿದೆ. ಹಾಗಾಗಿ ಶಿಷ್ಯರು ಮಹಾಸಭಾದ ಕಾರ್ಯಕ್ರಮಕ್ಕೆ ಹೋಗದಂತೆ ಹೇಳಿದ್ದಾರೆ. ಶಿಷ್ಯರಿಗೆ ನೋವು ಮಾಡಲು ನಾನು ತಯಾರಿಲ್ಲ. ಬೆಂಗಳೂರಿನ ವಿಶ್ವ ಹವ್ಯಕ ಸಮ್ಮೇಳನಕ್ಕೆ ನಾನು ಹೋಗೋದಿಲ್ಲ ಎಂದ ಸ್ವರ್ಣವಲ್ಲಿ ಸ್ವಾಮಿ ರಾಘುನ ಪರೋಕ್ಷವಾಗಿ ಮಂಗಳಾರತಿ ಎತ್ತಿದ್ದರು.
ಇದೊಂಥರಾ ಹವ್ಯಕ ಕಾವಿಗಳ ದಾಯಾದಿ ಕಲಹ. ರಾಘು ರಾಮಚಂದ್ರಾಪುರ ಮಠಾಧಿಕಾರಿ ಆಗುತ್ತಿದ್ದಂತೆಯೇ ಸಾಮ್ರಾಜ್ಯ ವಿಸ್ತರಣೆ ದಾಹದಿಂದ ಆಕ್ರಮಣಶೀಲ ಕಾರ್ಯಾಚರಣೆ ಆರಂಭಿಸಿದ್ದ. ಕೇರಳದ ಎಡೆನೀರು ಮಠ, ಶೃಂಗೇರಿ ಮಠ ಮತ್ತು ಸ್ವರ್ಣವಲ್ಲಿ ಮಠದ ಅನುಯಾಯಿಗಳಾಗಿದ್ದ ಹವ್ಯಕರನ್ನು ತನ್ನ ಮಠದ ತೆಕ್ಕೆಗೆ ತರಲು ತರಾತರದ ತಂತ್ರ ಹೆಣೆಯತೊಡಗಿದ್ದ.
ಯಾವಾಗ ರಾಘುನ ರಾಮಕಥಾ, ಗೋಕಥಾದ ಲೌಕಿಕ ಐಭೋಗದ ಕಥನ ಕಲೆಯ ಭರಾಟೆ ಜೋರಾಯಿತೋ ಆಗ ಹವ್ಯಕರು ಗೊಂದಲಕ್ಕೆ ಬಿದ್ದರು. ರಾಘುನ ಮನರಂಜನಾ ಧರ್ಮದಂಧೆಯ ಅಸಲಿಯತ್ತು ತಿಳಿಯದೆ ಅತ್ತ ಆಕರ್ಷಿತರಾದರು. ರಾಘುನ ಧರ್ಮೋದ್ಯಮ ಶೃಂಗೇರಿ ಸ್ವಾಮಿ, ಸ್ವರ್ಣವಲ್ಲಿ ಸ್ವಾಮಿಗಳ ನಿದ್ದೆಗೆಡಿಸಿತು. ತಮ್ಮ ಮಠ ಮಸುಕಾಗುವ ಆತಂಕಕ್ಕೆ ಬಿದ್ದರು. ವೈರಿಗಳಾಗಿ ಕಾಣೋಕೆ ನಿಂತರು! ಹವ್ಯಕ ಸಮುದಾಯದಲ್ಲಿ ಶೀತಲ ಗ್ಯಾಂಗ್‍ವಾರ್ ಆರಂಭವಾಯಿತು.
ಯಡ್ಡಿ ಸಿಎಂ ಆಗಿದ್ದಾಗ ರಾಘು ಕಳ್ಳದಾರಿಯಲ್ಲಿ ಆಗರ್ಭ ಶ್ರೀಮಂತ ಗೋಕರ್ಣ ದೇವಸ್ಥಾನವನ್ನು ಜೋಳಿಗೆಗೆ ಇಳಿಸಿಕೊಂಡಾಗಂತೂ ಸ್ವರ್ಣವಲ್ಲಿ ಸ್ವಾಮಿ ಗೋಕರ್ಣಕ್ಕೆ ಕಲಿ ಪ್ರವೇಶವಾಗಿದೆಯೆಂದು ಬಹಿರಂಗವಾಗೇ ಪ್ರತಿಭಟನೆಗೆ ಇಳಿದರು. ರಾಘುಗೆ ಗೋಕರ್ಣ ದೇವಸ್ಥಾನ ವಹಿಸಬಾರದೆಂದು ಬೀದಿಯಲ್ಲಿ ನಿಂತು ಕೂಗಾಡಿದ್ದರು. “ಪಾಯಸದಲ್ಲಿ ಕಲ್ಲು ಬಂದಂತಾಗಿದೆ” ಎಂದು ದೇವಸ್ಥಾನ ಹಸ್ತಾಂತರ ಪ್ರಕ್ರಿಯೆಯನ್ನು ಲೇವಡಿ ಮಾಡಿದ್ದರು. ಉತ್ತರಕನ್ನಡದ ಹವ್ಯಕರ ಮೇಲೆ ಹಿಡಿತ ಸಾಧಿಸಲು ಹಿಕಮತ್ತು ಮಾಡುತ್ತಿರುವ ರಾಘುಗೆ ಬಾಲ ಬಿಚ್ಚಲು ಬಿಡಬಾರದೆಂಬ ರಕ್ಷಣಾತ್ಮಕ ಆಟ ಸ್ವರ್ಣವಲ್ಲಿಯದಾಗಿತ್ತು. ಸ್ವರ್ಣವಲ್ಲಿ ಸ್ವಾಮಿ ಹಿಂದೆ ಶೃಂಗೇರಿ ಸ್ವಾಮಿ ಬಲವಾದ ಬೆಂಬಲವಾಗಿ ನಿಂತಿದ್ದರು.
ಆದರೆ ಅಧಿಕಾರಸ್ಥರನ್ನು ವಶಮಾಡಿಕೊಂಡಿದ್ದ ರಾಘುನ ಹಾರಾಟ ಇನ್ನಷ್ಟು ಜಾಸ್ತಿಯೇ ಆಯ್ತು. ಅಂದಿನ ಕುಮ್ಮಿ ಸರ್ಕಾರದಿಂದ ಇಂದಿನ ಕುಮ್ಮಿ ಸರ್ಕಾರದ ತನಕ ಅನಾಹುತಕಾರಿ ರಾಘುಗೆ ಸರ್ಕಾರಿ ಸಹಕಾರ ನಿರಂತರವಾಗಿ ಸಿಗುತ್ತಲೇ ಬಂದಿದೆ. ಕನ್ಯಾ ಸಂಸ್ಕಾರ, ಸ್ತ್ರೀಕಾಯ ಪ್ರವೇಶ, ಹೆಂಗಸರಿಗೆ ಏಕಾಂತ ದರ್ಶನದಂಥ “ಕ್ರಾಂತಿಕಾರಿ ಆವಿಷ್ಕಾರ”ಗಳನ್ನು ನಡೆಸಿ ಸಿಕ್ಕಿಬಿದ್ದ ರಾಘು ಪೊಲೀಸ್ ಕೇಸು, ಕೋರ್ಟು, ಪುರುಷತ್ವ ಪರೀಕ್ಷೆ ಗದ್ದಲ, ರೇಪ್ ರಾದ್ಧಾಂತಗಳಿಂದ ಕುಖ್ಯಾತನಾದಾಗ ಸಹಜವಾಗೇ ಶತ್ರು ಸಂತರಿಗೆ ಸಂತಸವಾಯ್ತು. ಆದರೆ ರಾಘು ಜೈಲು ಪಾಲಾಗಲಿಲ್ಲ; ಪೀಠದಿಂದ ಉಚ್ಛಾಟಿತನಾಗಲಿಲ್ಲ. ಕಾನೂನು-ನ್ಯಾಯ ವ್ಯವಸ್ಥೆಯನ್ನೇ ದಿಕ್ಕು ತಪ್ಪಿಸಿ ರಾಘು ಬಚಾವಾಗುತ್ತಲೇ ಹೋದ! ಆತನ ನಿರ್ಲಜ್ಜ ಅಟ್ಟಹಾಸ, ಅನಾಚಾರ ನಿರಂತರವಾಯ್ತು. ಆಗ ಕೊನೆ ಅಸ್ತ್ರವಾಗಿ ವಿರೋಧಿ ಯತಿಗಳು ಬ್ರಹ್ಮಚರ್ಯೆ ಪಾಲಿಸದ ರಾಘುಗೆ ಬಹಿಷ್ಕಾರ ಹಾಕೇಬಿಟ್ಟರು! ಸ್ವಾಮಿ ಗ್ಯಾಂಗಿನ ಗುದುಮುರಿಗೆ ಬಿರುಸಾಯ್ತು. ಹೊಗೆಯಾಡುತಿದ್ದ ಈ ಸನ್ಯಾಸಿಗಳ ಹುಸಿ ಪ್ರತಿಷ್ಠೆಯಜ್ಞ ಕುಂಡಕ್ಕೆ ವಿಶ್ವ ಹವ್ಯಕ ಸಮ್ಮೇಳನದಿಂದ ಹವಿಸ್ಸು ಬಿದ್ದಂತಾಗಿದೆ.
ಈ ಬೆಂಕಿ ಬುದ್ಧಿಗೇಡಿ ಬ್ರಾಹ್ಮಣ ಸಮುದಾಯ ಸುಡುವುದು ಖಂಡಿತ. ಸ್ವರ್ಣವಲ್ಲಿ ಸಾಧು ಹವ್ಯಕ ಸಮ್ಮೇಳನಕ್ಕೆ ಧಿಕ್ಕಾರ ಹಾಕಿ ಬುಸುಗುಡುತ್ತಿದ್ದಾರೆ. ರಾಘು ತಾನು ನಿಷ್ಕಳಂಕಿತ, ತನ್ನ ಮಠ ನಿರಪರಾಧಿ ಎಂದು ಪ್ರವಚನ ಬಿಗಿದು ಅದನ್ನ ಮಠದ ಫೇಸ್‍ಬುಕ್‍ಗೆ ಹಾಕಿ ಹವ್ಯಕರ ಪ್ರಚೋದಿಸಲು ಪ್ರಯತ್ನಿಸಿದ್ದಾನೆ. ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹೈಗರು ಸಾಗರೋಪಾದಿಯಲ್ಲಿ ಸೇರಬೇಕು; ಆ ಪ್ರಕ್ಷುಬ್ಧ ಕಡಲಲ್ಲಿ ತನ್ನ ಟೀಕಾಕಾರರು ¯ಯವಾಗಿ ಹೋಗಬೇಕೆಂಬುದು ರಾಘುನ ಹಠವಾಗಿತ್ತು. ವಿರೋಧಿ ಸನ್ಯಾಸಿಗಳಿಗೋ ರಾಘು ಸ್ವಾಮಿಯಾಗಿರುವ ಅರ್ಹತೆ ಕಳಕೊಂಡ ಲಂಪಟನೆಂದು ಜಗಜ್ಜಾಹೀರು ಮಾಡುವ ದರ್ದು. ಈ ಕಾವಿ ಕಾಳಗದಲ್ಲಿ ಹವ್ಯಕರ ಮಾನ ಮಾತ್ರ ಹರಾಜು!!

ಶುದ್ಧೋದನ |

2 thoughts on “ಕಪಟ ಕಾವಿ ಕಾಳಗದಲ್ಲಿ ಹವ್ಯಕರ ಮಾನ ಹರಾಜು!! ರಾಘು ಸ್ವಾಮಿಯ ಅಪ್ರಕಟಿತ ಅಸಹ್ಯ ಪುರಾಣ

Leave a Reply

Your email address will not be published.

Social Media Auto Publish Powered By : XYZScripts.com