ಪೂರ್ವ ಯೋಜಿತ ಸಂದರ್ಶನದಲ್ಲೂ ಪ್ರಧಾನಿಗೆ ರಫೇಲ್ ಬಗ್ಗೆ ಮಾತನಾಡುವ ಧೈರ್ಯವಿಲ್ಲ : ರಾಹುಲ್ ಗಾಂಧಿ

ಸುದ್ದಿ ಸಂಸ್ಥೆಗೆ ಪ್ರಧಾನಿ ಮೋದಿ ನೀಡಿದ ಸಂದರ್ಶನ ಪೂರ್ವಯೋಜಿತವಾಗಿತ್ತು. ಆದಾಗ್ಯೂ ಆ ಒಂದೂವರೆ ಗಂಟೆಯಲ್ಲಿ ರಫೇಲ್ ಬಗ್ಗೆ ಉತ್ತರಿಸುವ ಧೈರ್ಯ ತೋರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಹೇಳಿಕೆಯು ಲೋಕಸಭೆಯಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದು, ಗಾಂಧಿಯ ಈ ಮಾತು ಹತಾಶೆಯದ್ದಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

“ಮೂರು ಸ್ತಂಭಗಳ ಮೇಲೆ ರಫೇಕ್ ಕುರಿತ ಪ್ರಶ್ನೆಗಳು ಹುಟ್ಟಿಕೊಂಡಿವೆ — ಮೊದಲನೆಯದು ಪ್ರಕ್ರಿಯೆ, ಎರಡನೆಯದು ಬೆಲೆ ನಿಗದಿ ಮತ್ತು ಮೂರನೆಯದು ನೆರವು. ಈ ಪ್ರಶ್ನೆಗಳನ್ನು ನಾವು ಆರಂಭದಿಂದಲೂ ಪ್ರಧಾನಿಯ ಬಳಿ ಕೇಳುತ್ತಿದ್ದೇವೆ” ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು.

ಅನಿಲ್ ಅಂಬಾನಿ ಒಬ್ಬ ವಿಫಲ ಉದ್ಯಮಿ ಎಂದು ಹೇಳಿದ ರಾಹುಲ್, “ಅನಿಲ್ ಅಂಬಾನಿ ರಫೇಲ್ ಡೀಲ್‌ಗಿಂತ 10 ದಿನಗಳ ಮೊದಲು ಕಂಪನಿ ತೆರೆಯುತ್ತಾರೆ ಮತ್ತು ಪ್ರಧಾನಿ ಮೋದಿ ಆ ಡೀಲ್ ಅವರಿಗೆ ಹೋಗುವಂತೆ ಆದೇಶಿಸುತ್ತಾರೆ. ಡಸಾಲ್ಟ್ ನಿಂದ ನೀವ್ಯಾಕೆ ರಫೇಲ್‌ ಗುತ್ತಿಗೆಯನ್ನು ತೆಗುದುಕೊಳ್ಳುತ್ತೀರಿ ಮತ್ತು ಅದನ್ನು ನಿಮ್ಮ ಆತ್ಮೀಯ ಸ್ನೇಹಿತನಿಗೆ ನೀಡುತ್ತೀರಿ?” ಎಂದು ಪ್ರಶ್ನಿಸಿದರು.

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ರಫೇಲ್ ಕುರಿತು ನೈಜ ಸಾಕ್ಷ್ಯ ನೀಡುತ್ತಿಲ್ಲ, ಸುಮ್ಮನೇ ಮಾತನಾಡುತ್ತಿದೆ. ಅವರಿಗೆ ಪದೇ ಪದೇ ಮಾತನಾಡುವ ಕಾಯಿಲೆಯಿದ್ದರೆ ನಾನು ಅದರಲ್ಲಿ ಸಿಕ್ಕಿಹಾಕಿಕೊಳ್ಳಬೇಕೇ ಎಂದು ಹೇಳಿದ್ದರು.

 

Leave a Reply

Your email address will not be published.