Ranji Trophy : ಮನೀಶ್ ಪಾಂಡೆ ಶತಕ – ಛತ್ತೀಸ್ ಗಢ ವಿರುದ್ಧ ಕರ್ನಾಟಕಕ್ಕೆ 198 ರನ್ ಜಯ

ಬೆಂಗಳೂರು, ಡಿ.2(ಯುಎನ್ಐ)- ವೇಗಿ ರೋನಿತ್ ಮೋರೆ ಹಾಗೂ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಅವರ ಬಿಗುವಿನ ಬೌಲಿಂಗ್ ನೆರವಿನಿಂದ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ 198 ರನ್ ಗಳಿಂದ ಛತ್ತೀಸ್ ಗಢ ತಂಡವನ್ನು ಪರಾಭವ ಗೊಳಿಸಿದೆ.
ನೆಲಮಂಗಲದ ಆಲೂರು ಮೈದಾನದಲ್ಲಿ ನಡೆದ ಕೊನೆಯ ದಿನದ ಪಂದ್ಯದಲ್ಲಿ ಮನೀಶ್ ಪಾಂಡೆ ಪಡೆ 4 ವಿಕೆಟ್ ಗೆ 113 ರನ್ ಗಳಿಂದ ಆಟ ಮುಂದುವರಿಸಿ, 7 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಛತ್ತೀಸ್ ಗಢ ತಂಡ 156 ರನ್ ಗಳಿಗೆ ಸರ್ವಪತನ ಹೊಂದಿತು. ಎಲೈಟ್ ಎ ಗುಂಪಿನ ಅಂಕ ಪಟ್ಟಿಯಲ್ಲಿ ಕರ್ನಾಟಕ 7 ಪಂದ್ಯಗಳಿಂದ 27 ಅಂಕಗಳಿಸಿ, ಎರಡನೇ ಸ್ಥಾನದಲ್ಲಿದೆ.

ಸವಾಲಿನ ಗುರಿ ಹಿಂಬಾಲಿಸಿದ ಛತ್ತೀಸ್ ಗಢ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಸಮಯೋಚಿತ ಆಟಕ್ಕೆ ಮಣೆ ಹಾಕಿತು. ಆರಂಭಿಕ ಅವಿನಾಶ್ ಸಿಂಗ್ (61) ಹಾಗೂ ಎ.ಜಿ.ತಿವಾರಿ (14) ತಂಡಕ್ಕೆ ಸಾಧಾರಣ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಮನೋಜ್ ಸಿಂಗ್ (6) ಹಾಗೂ ಹರಪ್ರೀತ್ ಸಿಂಗ್ ಭಾಟಿಯಾ (9) ಜವಾಬ್ದಾರಿ ಮರೆತರು. ಅಮನ್ ದೀಪ್ ಖರೆ 35 ರನ್ ಬಾರಿಸಿ ತಂಡಕ್ಕೆ ನೆರವಾದರು. ಆರಂಭಿಕ ಅವಿನಾಶ್ 142 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 61 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಕರ್ನಾಟಕದ ಪರ ವೇಗಿ ರೋನಿತ್ ಮೋರೆ 35 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ 44 ರನ್ ಗೆ 4 ವಿಕೆಟ್ ಪಡೆದರು.

ಮನೀಶ್ ಪಾಂಡೆ ಶತಕ
ನಾಯಕನ ಆಟವಾಡಿದ ಮನೀಶ್ ಪಾಂಡೆ 102 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 102 ರನ್ ಬಾರಿಸಿ ತಂಡಕ್ಕೆ ನೆರವಾದರು. ಉಳಿದಂತೆ ಶ್ರೇಯಸ್ ಗೋಪಾಲ್ (22), ಗೌತಮ್ ಕೆ (20), ಅಭಿಮನ್ಯು ಮಿಥುನ್ (33) ತಂಡಕ್ಕೆ ಕೊಂಚ ಆಸರೆಯಾದರು. ಅಂತಿಮವಾಗಿ ಕರ್ನಾಟಕ 7 ವಿಕೆಟ್ ಗೆ 219 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

One thought on “Ranji Trophy : ಮನೀಶ್ ಪಾಂಡೆ ಶತಕ – ಛತ್ತೀಸ್ ಗಢ ವಿರುದ್ಧ ಕರ್ನಾಟಕಕ್ಕೆ 198 ರನ್ ಜಯ

Leave a Reply

Your email address will not be published.

Social Media Auto Publish Powered By : XYZScripts.com