ಪ್ರಧಾನಿ ಮೋದಿ ಸಂದರ್ಶನ : ಉತ್ತರಿಸದ 10 ಪ್ರಶ್ನೆಗಳ ಪಟ್ಟಿ ಕೊಟ್ಟ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ಕೆಲವೇ ನಿಮಿಷಗಳಲ್ಲಿ ಪತ್ರಿಕಾಗೋಷ್ಠಿಯ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ. ಪ್ರಧಾನಿ ಉತ್ತರಿಸದ 10 ಪ್ರಮುಖ ವಿಚಾರಗಳ ಪಟ್ಟಿಯನ್ನೂ ನೀಡಿದೆ. ಅದೊಂದು ಸ್ವಗತ ಸಂದರ್ಶನ ಎಂದು ಟೀಕಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನಿ “ನಾನು, ನನ್ನದು, ನನ್ನಿಂದ” ಕುರಿತಷ್ಟೇ ಮಾತಾಡಿದ್ದಾರೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಪಟ್ಟಿ ಮಾಡಿರುವ ಪ್ರಧಾನಿ ಉತ್ತರಿಸದ ಪ್ರಶ್ನೆಗಳು ಇಲ್ಲಿವೆ:

1. ಮೊದಲನೆಯದಾಗಿ, ನಮಗೆ ಹೇಳಿ ಮೋದಿಜಿ, ಜನರು ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ರೂ. ಪಡೆದಿದ್ದಾರಾ ಅಥವಾ ಇಲ್ವಾ ಹೇಳಿ? ಮೊದಲ 100 ದಿನಗಳಲ್ಲಿ 80 ಲಕ್ಷ ಕೋಟಿ ರೂ. ಕಪ್ಪುಹಣವನ್ನು ಮರಳಿ ತರುವುದಾಗಿ ನೀಡಿದ್ದ ಆಶ್ವಾಸನೆ ಏನಾಯ್ತು? 55 ತಿಂಗಳ ನಂತರವಾದರೂ ಒಂದು ರೂಪಾಯಿ ಬಂದಿದೆಯಾ?
2. “ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದಿರಿ. 55 ತಿಂಗಳಲ್ಲಿ 9 ಕೋಟಿ ಉದ್ಯೋಗಗಳಾಗಬೇಕಿತ್ತು. ಭಾರತದಲ್ಲಿ 9 ಲಕ್ಷ ಉದ್ಯೋಗಗಳನ್ನಾದರೂ ನೀವು ಸೃಷ್ಟಿಸಿದ್ದೀರಾ?”
3. “ರೈತರಿಗೆ ವೆಚ್ಚ ಪ್ಲಸ್ ಶೇಕಡಾ 50ರಷ್ಟು ಲಾಭದ ಜುಮ್ಲಾ ನೀಡಬೇಕು. ಆದರೆ ರೈತರು ಲಾಭ ಬಿಡಿ, ವೆಚ್ಚವನ್ನಾದರೂ ಗಳಿಸುತ್ತಿದ್ದಾರಾ?”
4. “ನೀವು ಸರಳೀಕೃತ ಉದ್ಯಮದ ಭರವಸೆ ನೀಡಿದ್ದಿರಿ. ಆದರೆ ಜಿಎಸ್‌ಟಿ- ಗಬ್ಬರ್ ಸಿಂಗ್ ಟ್ಯಾಕ್ಸ್ ಮೂಲಕ ಯಾಕೆ ಅವರಿಗೆ ಹೊಡೆತ ನೀಡಿದಿರಿ?”
5. “ನಿಮ್ಮ ಅಪನಗದೀಕರಣವು ಕಪ್ಪು ಹಣ ಹೊಂದಿರುವವರು ಬಿಳಿಯಾಗಿ ಪರಿವರ್ತಿಸಿಕೊಳ್ಳಲು ನೆರವಾಯಿತು. ಅದರಿಂದ ಆರ್ಥಿಕತೆಗೆ 3.5 ಲಕ್ಷ ಕೋಟಿ ಹೊಡೆತ ಬಿತ್ತು. ಮಹಿಳೆಯರು ವರ್ಷಗಳಿಂದ ಉಳಿತಾಯ ಮಾಡಿಕೊಂಡು ಬಂದಿದ್ದ ಲಕ್ಷಾಂತರ ರೂಪಾಯಿಯನ್ನು ಲೂಟಿ ಮಾಡಲಾಯಿತು. ಬ್ಯಾಂಕ್ ಕ್ಯೂನಲ್ಲಿ 120 ಜನರು ಪ್ರಾಣ ಕಳೆದುಕೊಂಡರು. ಇದಕ್ಕೆ ಯಾರು ಹೊಣೆ?”
6. “ಜಮ್ಮು ಕಾಶ್ಮೀರದಲ್ಲಿ, ಕಳೆದ 55 ತಿಂಗಳಲ್ಲಿ 428 ಯೋಧರು ಮೃತಪಟ್ಟಿದ್ದಾರೆ ಹಾಗೂ 278 ನಾಗರಿಕರು ಅಸುನೀಗಿದ್ದಾರೆ. ಮಾವೋವಾದಿಗಳ ದಾಳಿಯಲ್ಲಿ 248 ಜವಾನರು ಹಾಗೂ 378 ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದ್ದು ಯಾಕೆ?”
7. “ಭ್ರಷ್ಟಾಚಾರ ಮಿತಿ ಮೀರಿದ್ದು ಸತ್ಯ ಅಲ್ವೇ? ಜನಸಾಮಾನ್ಯರ ನಿತ್ಯ ಜೀವನದಿಂದ 30,000 ಕೋಟಿ ರೂ.ನ ರಫೇಲ್ ಹಗರಣದ ತನಕ. ನೀವು ತಪ್ಪು ಮಾಡದೇ ಇದ್ದರೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ನೀವ್ಯಾಕೆ ಹೆದರುತ್ತೀರಿ?”
8. “ಗಂಗಾ ಮಾ ಸ್ವಚ್ಛ ಆಗಿದ್ದಾಳೆಯೇ ಈಗ? ನಿಮ್ಮ ಕೇಂದ್ರೀಯ ಮಾಲಿನ್ಯ ಮಂಡಳಿಯ ಪ್ರಕಾರ, 49 ಸ್ಥಳಗಳ ಪೈಕಿ 38 ಸ್ಥಳಗಳು ಈಗಲೂ ಮಲಿನಗೊಂಡಿವೆ. 100ರಲ್ಲಿ ಎಷ್ಟು ಸ್ಮಾರ್ಟ್ ಸಿಟಿಗಳನ್ನು ನೀವು ನಿರ್ಮಿಸಿದ್ದೀರಿ? ಒಂದೂ ಆದಂತಿಲ್ಲ.”
9. “ಸ್ಟಾರ್ಟಪ್ ಇಂಡಿಯಾ, ಸ್ಟಾಂಡಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಏನಾದವು? ನೀತಿ ಆಯೋಗ ಹೇಳುತ್ತಿದೆ, ಉತ್ಪಾದನಾ ಪ್ರಗತಿ ಕೇವಲ ಶೇಕಡಾ 0.5ರಷ್ಟಿದೆ. ”
10. “ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿದ್ದರೂ ಇಂಧನ ಬೆಲೆಗಳು ಯಾಕೆ ದುಬಾರಿಯಾಗಿವೆ? ಇದೇನಾ ನಿಮ್ಮ ಅಚ್ಛೇ ದಿನ್?”

Leave a Reply

Your email address will not be published.

Social Media Auto Publish Powered By : XYZScripts.com