ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣಕುಂಭ ಮೆರವಣಿಗೆ ಕೈಬಿಡಲು ಆಗ್ರಹ – ಅಧ್ಯಕ್ಷರಿಗೆ ಮನವಿ ಪತ್ರ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲು ಉದ್ದೇಶಿಸಿರುವ ೧೦೦೧ ಮಹಿಳೆಯರ ಪೂರ್ಣಕುಂಭ ಮೆರವಣಿಗೆಯನ್ನು ಕೈ ಬಿಡುವಂತೆ ಆಗ್ರಹಿಸಿ ನಾಡಿನ ಪ್ರಜ್ಞಾವಂತ ಜನರೆಲ್ಲ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿಗಳಿಗೆ ಕರೆ ನೀಡಿದ್ದಾರೆ. ಈ ಕುರಿತು ಒಂದು ಮನವಿ ಪತ್ರವನ್ನು ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಕಳುಹಿಸಲಾಗಿದೆ.

ಜನವರಿ ೪ರಂದು ಆರಂಭವಾಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೧೦೦೧ ಮಹಿಳೆಯರ ಪೂರ್ಣ ಕುಂಭ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಬಗ್ಗೆ ಈಗಾಗಲೇ ರಾಜ್ಯದ ಪ್ರಜ್ಞಾವಂತ ಜನರೆಲ್ಲರೂ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದು, ಈ ಪೂರ್ಣಕುಂಭ ಮೆರವಣಿಗೆ ಕೈ ಬಿಡುವಂತೆ ಆಗ್ರಹ ಪಡಿಸಲಾಗಿದೆ.

‘ ಇಂತಹ ಮೆರವಣಿಗೆಯು ಮಹಿಳೆಯರ ಶೋಷಣೆಯ ಪ್ರತೀಕ ಆಗಿರುತ್ತದೆ. ಸ್ವಸಹಾಯ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಹೀಗೆ ಮೆರವಣಿಗೆಯಲ್ಲಿ ಪ್ರದರ್ಶಕ ವಸ್ತುಗಳಂತೆ ಬಳಕೆ ಮಾಡುವುದು ಆಧುನಿಕ ಸಮಾಜದ ಅಣಕವಾಗಿರುತ್ತದೆ. ಸಂಸ್ಕೃತಿ, ಆಚರಣೆಗಳ ಹೆಸರಿನಲ್ಲಿ ಹೀಗೆ ಮೆರವಣಿಗೆ ಮಾಡಿಸುವುದಕ್ಕೂ, ಮಾರುಕಟ್ಟೆ ಸಾಮಗ್ರಿಗಳ ಪ್ರಚಾರಕ್ಕೆ ಜಾಹಿರಾತುಗಳಲ್ಲಿ ಹೆಣ್ಣನ್ನು ಬಳಸುವುದಕ್ಕೂ ಏನೂ ವ್ಯತ್ಯಾಸ ಇರುವುದಿಲ್ಲ ‘

‘ ಕನ್ನಡ ಸಾಹಿತ್ಯವು ಮಹಿಳೆಯರನ್ನು ಗೌರವದಿಂದ ಕಂಡಿದೆ. ಬೇಂದ್ರೆ, ಕಾರಂತ, ಕುವೆಂಪು, ಗೋಕಾಕ, ತೀನಂಶ್ರೀ, ಮಾಸ್ತಿ, ಕೆ.ಎಸ್.ನರಸಿಂಹಸ್ವಾಮಿ, ನಿಸಾರ್ ಅಹಮದ್, ಜಿ.ಎಸ್.ಎಸ್. ಕೀರಂ, ಮೊದಲಾದ ಎಲ್ಲ ಮೇರು ಸಾಹಿತಿಗಳು ಮಹಿಳೆಯರಿಗೆ ಸಾಹಿತ್ಯಕ ವೇದಿಕೆಗಳಲ್ಲಿ ಸಮಾನ ಸ್ಥಾನ ಮಾನ ಕೊಡಬೇಕು, ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದು ಒತ್ತಿ ಹೇಳಿದ್ದಾರೆ. ಈಗ ಅಂತಹ ಸಾಹಿತ್ಯಕ ಪರಂಪರೆಯ ಉತ್ಸವ ಮಾಡುವಾಗ ಅದಕ್ಕೆ ವಿರುದ್ಧವಾಗಿ ಮಹಿಳೆಯರ ಮೆರವಣಿಗೆ ಮಾಡಿಸಿದರೆ ಅದು ಸಾಹಿತ್ಯಕ್ಕೆ, ಸಾಹಿತ್ಯ ಪರಿಷತ್ತಿನ ಆಶಯಗಳಿಗೆ ಹಾಗೂ ಕನ್ನಡ ಕಟ್ಟಿದ ಧೀಮಂತರ ನಡೆ- ನುಡಿಗೆ ಮಾಡುವ ಅವಮಾನ ಆಗುತ್ತದೆ ‘

ಈ ಕುರಿತು ನಾಡಿ ಪ್ರಜ್ಞಾವಂತರೆಲ್ಲ ತಮ್ಮ ವಿರೋಧ ವ್ಯಕ್ತ ಪಡಿಸಿದ್ದು ಮೆರವಣಿಗೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com