Film news : 150 ಕೋಟಿಯ ಕ್ಲಬ್ ಸೇರಿದ KGF, 200ಕೋಟಿ ಯತ್ತ ಯಶ್ ಚಿತ್ರ…

ಕೆಜಿಎಫ್ ಈಗ ವಿಶ್ವಾದ್ಯಂತ 150 ಕೋಟಿ ರೂ. ಕಲೆಕ್ಷನ್‍ ಮಾಡಿದ ಕನ್ನಡದ ಏಕೈಕ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಗದಲ್ಲಿ ಕಲೆಕ್ಷನ್‌ ಮಾಡಿದರೆ ಕೆಜಿಎಫ್​’ ಚಿತ್ರ 200 ಕೋಟಿ ಗಳಿಕೆ ದಾಟಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಈಗಾಗಲೇ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 160 ಕೋಟಿ ರೂ. ಗಡಿ ತಲುಪಿರುವುದರಿಂದ ಸಿನಿಮಾ ದ್ವಿಶತಕ ಬಾರಿಸಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಇದು ಘಟಿಸಿದರೆ ಸ್ಯಾಂಡಲ್​ವುಡ್​ನಲ್ಲಿ ‘ಕೆಜಿಎಫ್​’ ಹೊಸ ದಾಖಲೆ ಮಾಡಿದಂತಾಗುತ್ತದೆ.

ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ಡಬ್​ ಆಗಿ ತೆರೆಕಂಡರೆ ಅವುಗಳಿಗೆ ಮೈಲೇಜ್​ ಸಿಗುವುದು ತೀರಾ ಅಪರೂಪ. ಆದರೆ, ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ಮಾತ್ರ ಇದಕ್ಕೆ ಅಪವಾದ. ಕಾರಣ ಈ ಸಿನಿಮಾ ಹಿಂದಿ ಭಾಷೆಯಲ್ಲಿ 30-50 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.

ಬಿಡುಗಡೆಯಾದ 5ನೇ ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿದ್ದ ಯಶ್ ಅಭಿನಯದ ಕೆಜಿಎಫ್ ಈಗ ಎರಡನೇ ವಾರಾಂತ್ಯದಲ್ಲಿ 150 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈಗ ವಿದೇಶದಲ್ಲೂ ಕೆಜಿಎಫ್ ಸ್ಕ್ರೀನ್ ಹೆಚ್ಚಳವಾಗುತ್ತಿದ್ದು ಮತ್ತಷ್ಟು ಕಲೆಕ್ಷನ್ ಜಾಸ್ತಿಯಾಗಲಿದೆ.

ಎಲ್ಲ ಭಾಷೆಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ಕೇಳಿ ಬಂದಿದೆ. ಹಾಗಾಗಿ ಸಿನಿಮಾ ಬಾಕ್ಸ್​ ಆಫೀಸ್​ ಕಲೆಕ್ಷನ್​ ಕೂಡ ಹೆಚ್ಚುತ್ತಿದೆ. ವಿಶ್ವಾದ್ಯಂತ ಈ ಚಿತ್ರ 160 ಕೋಟಿ ರೂ. ದಾಟಿದೆ ಎಂಬುದು ಬಾಲಿವುಡ್​ ತಜ್ಞರ ಅಭಿಪ್ರಾಯ.

ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಹಲವು ಜನ ಊರು ಮತ್ತು ಪ್ರವಾಸಕ್ಕೆ ತೆರಳಿದ್ದರು. ಹೀಗಾಗಿ ಸಿನಿಮಾ ವೀಕ್ಷಿಸದವರು ಈಗ ಚಿತ್ರ ಮಂದಿರದತ್ತ ಬರುತ್ತಿದ್ದಾರೆ.

ಕೆಜಿಎಫ್ ಬಿಡುಗಡೆಯಾದ ದಿನವೇ ರಿಲೀಸ್ ಆಗಿದ್ದ ಶಾರೂಖ್ ಖಾನ್ ಅಭಿನಯದ ಝೀರೋ ಎರಡನೇ ವಾರಾಂತ್ಯದ ವೇಳೆಗೆ ಒಟ್ಟು 80 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸಿನಲ್ಲಿ ಶಾರೂಖ್ ಅಭಿನಯದ ಅತಿ ಕಡಿಮೆ ಗಳಿಕೆ ಮಾಡಿದ ಚಿತ್ರ ಝೀರೋ ಆಗಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಈ ಚಿತ್ರದ ಎರಡನೇಯ ಭಾಗದ ಶೂಟಿಂಗ್ ಈಗಾಗಲೇ ಶೇ 15 % ರಷ್ಟು ಮುಗಿದಿದ್ದು, ಉಳಿದ ಭಾಗವನ್ನು ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಚಿತ್ರೀಕರಣ ಆರಂಭಿಸುವುದು ಚಿತ್ರತಂಡದ ಪ್ಲಾನ್. ಈ ಚಾಫ್ಟರ್ 2 ಚಿತ್ರದಲ್ಲಿಯೂ ಮೊದಲಿನ ಭಾಗದ ಕಲಾವಿದರೇ ಇರಲಿದ್ದು, ಇಲ್ಲಿ ನಾಯಕಿ ಶ್ರೀ ನಿಧಿ ಶೆಟ್ಟಿಯ ಪಾತ್ರಕ್ಕೆ ಸ್ಕೋಪ್ ಇರಲಿದೆ.

ಸಹಜವಾಗಿ ಮೊದಲ ಅವತರಣಿಕೆಗಿಂತ ದೊಡ್ಡಮಟ್ಟದಲ್ಲೇ ‘ಚಾಪ್ಟರ್ 2’ ನೋಡ ಬಯಸುತ್ತಾರೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲು ತಂಡ ಸಜ್ಜಾಗುತ್ತಿದೆ.

ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಯ ಅವತರಣಿಕೆಗಳು ಉತ್ತಮ ಕಲೆಕ್ಷನ್ ಮಾಡುತ್ತಿರುವಂತೆ ಮಲೇಷ್ಯಾ, ದುಬೈ, ಶ್ರೀಲಂಕಾ, ಸಿಂಗಾಪುರ, ಮತ್ತು ಆಸ್ಟ್ರೇಲಿಯಾದಲ್ಲೂ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಚೀನಾ ಭಾಷೆಯಲ್ಲೂ ಬಿಡುಗಡೆಯಾಗಲಿದೆ ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿಯಾಗಿದೆ.

Leave a Reply

Your email address will not be published.