ಆರ್‌ಟಿಐ ಕಾಯ್ದೆಯ ನಾಶಕ್ಕೆ ಯತ್ನಿಸುತ್ತಿದೆ ಮೋದಿ ಸರ್ಕಾರ, ಇದು ಪ್ರಜಾಪ್ರಭುತ್ವಕ್ಕೆ ಅಪಾಯ

60 ಲಕ್ಷಕ್ಕೂ ಅಧಿಕ ಮಾಹಿತಿ ಕೋರಿ ಅರ್ಜಿಗಳು ಪ್ರತಿ ವರ್ಷ ಸಲ್ಲಿಕೆಯಾಗುತ್ತಿದ್ದು, ಭಾರತೀಯ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ಬಳಕೆಯಾದ ಪಾರದರ್ಶಕ ಶಾಸನವಾಗಿದೆ. ಸರ್ಕಾರವನ್ನು ಹೊಣೆಗಾರಿಕೆ ನಡೆಯುವಂತೆ ಮಾಡುವ ಅಧಿಕಾರವನ್ನು ಸಾಮಾನ್ಯ ನಾಗರಿಕರಿಗೂ ಈ ಕಾನೂನು ನೀಡುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಅನೇಕ ಮಹತ್ವಪೂರ್ಣ ಹಾಗೂ ರಾಜಕೀಯವಾಗಿ ಸೂಕ್ಷ್ಮವಾದ ನಿರ್ಧಾರಗಳನ್ನು ಮಾಹಿತಿ ಆಯುಕ್ತರು ಕೈಗೊಂಡಿದ್ದಾರೆ. ಅವುಗಳೆಂದರೆ, ಸಾಲದ ಸುಸ್ತಿದಾರರ ಹೆಸರು ಬಹಿರಂಗಪಡಿಸುವಂತೆ ಆರ್‌ಬಿಐಗೆ ನಿರ್ದೇಶನ, ರಾಜಕೀಯ ಪಕ್ಷಗಳನ್ನು ಆರ್‌ಟಿಐ ಕಾಯ್ದೆಯಡಿ ಬರುವ ಸಾರ್ವಜನಿಕ ಸಂಸ್ಥೆಗಳಾಗಿ ಘೋಷಣೆ, 1978ರ ಬ್ಯಾಚ್‌ನ ಫಲಿತಾಂಶದ ಮಾಹಿತಿ ನೀಡುವಂತೆ ದೆಹಲಿ ವಿವಿಗೆ ಆದೇಶ (ಮೋದಿ ಪದವಿ ಪಡೆದಿದ್ದಾರೆ ಎನ್ನಲಾದ ವರ್ಷ).

ಇದರಿಂದಾಗಿ ಸರ್ಕಾರಗಳಿಂದ ಹಿಂದೇಟು. ಆರ್‌ಟಿಐ ಹಾಗೂ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ವನ್ನು ದುರ್ಬಲಗೊಳಿಸುವ ಪ್ರಯತ್ನ ಆಶ್ಚರ್ಯವೇನಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೋರ್ಟ್ ಮಧ್ಯಪ್ರವೇಶವಿಲ್ಲದೆ ಸಿಐಸಿಗೆ ಒಬ್ಬರೂ ಆಯುಕ್ತರನ್ನು ನೇಮಿಸಿದ್ದಿಲ್ಲ. 2014ರ ಆಗಸ್ಟ್ ನಲ್ಲಿ ಅದರ ಮುಖ್ಯಸ್ಥರು ನಿವೃತ್ತರಾದ ಮೇಲೆ 10 ತಿಂಗಳ ಕಾಲ ನೇತಾರರೇ ಇರಲಿಲ್ಲ. ಪ್ರಸ್ತುತ ಸಿಐಸಿಯ ಮಾಹಿತಿ ಆಯುಕ್ತರ ಹನ್ನೊಂದು ಹುದ್ದೆಗಳ ಪೈಕಿ ಮುಖ್ಯಸ್ಥರ ಸಹಿತ ಎಂಟು ಖಾಲಿ ಇವೆ. ಆಯುಕ್ತರ ನೇಮಕಾತಿ ಆಗದೇ ಇರುವುದರಿಂದ ಜನರ ಅರ್ಜಿಗಳು ವಿಲೇವಾರಿಯಾದೆ ಬಾಕಿ ಬಿದ್ದಿವೆ. ಇದರಿಂದಾಗಿ ಆರ್‌ಟಿಐ ಕಾಯ್ದೆ ಪರಿಣಾಮಕಾರಿಯಾಗುತ್ತಿಲ್ಲ. ಸಿಐಸಿಯ ಎದುರು ಸುಮಾರು 26,500 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ಇವುಗಳಲ್ಲಿ ಹೆಚ್ಚಿನವು ಎರಡು ವರ್ಷಗಳಿಗಿಂತ ಹಿಂದೆ ಸಲ್ಲಿಕೆಯಾದವುಗಳಾಗಿವೆ.
ಸಿಐಸಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಸರ್ಕಾರ 2018ರ ಜುಲೈನ ಮುಂಗಾರು ಅಧಿವೇಶನದ ವೇಳೆ ರಹಸ್ಯವಾಗಿ ಆರ್‌ಟಿಐ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನ ಕಲಾಪದಲ್ಲಿ ಮಂಡಿಸಲು ಸಜ್ಜಾಗಿತ್ತು. ಆ ತಿದ್ದುಪಡಿಯಲ್ಲಿ ಮಾಹಿತಿ ಆಯುಕ್ತರ ಸ್ವಾಯತ್ತೆಯನ್ನು ಕಸಿಯುವ ಪ್ರಸ್ತಾಪವಿತ್ತು.
ಈ ತಿದ್ದುಪಡಿ ಮಸೂದೆಗೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿಲ್ಲ. ಆದರೆ ಪ್ರಸ್ತಾಪವನ್ನು ಇನ್ನೂ ಕೈಬಿಡಲಾಗಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com