ಫುಟ್ಪಾತ್ ಮೇಲೆ ವಾಹನ ಚಲಾಯಿಸಿದರೆ ಹುಷಾರ್..! ಕ್ರಿಮಿನಲ್‌ ಕೇಸ್‌ ಇಲ್ಲವೇ ಜೈಲುಶಿಕ್ಷೆ ಗ್ಯಾರೆಂಟಿ

ನಗರದಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್. ಸಂಚಾರ ದಟ್ಟಣೆ. ಕೆಲವೊಂದು ಬಾರಿ ರಸ್ತೆ ಮೇಲೆ ಚಲಿಸಲು ಸಾಧ್ಯವಾಗದಂತಹ ಸಮಸ್ಯೆಗಳು ಬಂದೊದಗಿಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ ದುಡುಕಬೇಡಿ. ಅವಸರಕ್ಕೆ ಬಿದ್ದು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಬೇಡಿ. ಹೀಗೆ ಮಾಡಿದರೆ 2500 ರೂ. ದಂಡ ಇಲ್ಲದಿದ್ದರೆ ಜೈಲು ಶಿಕ್ಷೆ ಗ್ಯಾರೆಂಟಿ.

ಹೌದು.. ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತದೆ. ಸಿಗ್ನಲ್ ಕಾರಣಕ್ಕೋ, ರಸ್ತೆ ಕಾಮಗಾರಿ ಇಲ್ಲವೇ ಮೆಟ್ರೋ ಕಾಮಗಾರಿ ಕಾರಣಕ್ಕೋ ಬೆಂಗಳೂರಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೆ ಬೈಕ್ ಸವಾರರು ರಸ್ತೆ ಪಕ್ಕದಲ್ಲಿರುವ ಫುಟ್ ಪಾತ್ ಮೇಲೆಯೇ ಬೈಕ್ ಚಲಾಯಿಸಿಕೊಂಡು ಮುನ್ನುಗ್ಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ನಿಟ್ಟಿನಲ್ಲಿ ವಾಹನ ಸವಾರ ಈ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು ಭಾರೀ ದಂಡ ವಿಧಿಸಲು ಮುಂದಾಗಿದ್ದಾರೆ.

ಫುಟ್‌ಪಾತ್‌ ಇರುವುದು ಸಾರ್ವಜನಿಕರ ಓಡಾಟಕ್ಕಾಗಿ ಮಾತ್ರ. ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ ಅಂತವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುತ್ತಿರುವ ಪೊಲೀಸರು, ನಿಯಮ ಉಲ್ಲಂಘಿಸುವ ಸವಾರರಿಂದ ನ್ಯಾಯಾಲಯದಲ್ಲಿ ದಂಡ ಕಟ್ಟಿಸುತ್ತಿದ್ದಾರೆ. ಕ್ರಿಮಿನಲ್‌ ಕೇಸ್‌ ದಾಖಲಿಸಿದ ಬಳಿಕ 2500 ರೂ. ದಂಡ ಕಟ್ಟಬೇಕು, ಇಲ್ಲದಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

ನಗರದಲ್ಲಿ ಪಾದಚಾರಿ ಮಾರ್ಗದಲ್ಲಿ ಬೈಕ್‌ಗಳ ಹಾವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ವಿಶೇಷ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಒಂದೇ ವಾರದಲ್ಲಿ 250ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಹರಿಶೇಖರನ್‌ ತಿಳಿಸಿದ್ದಾರೆ.

ಹಲವು ಬೈಕ್‌ ಸವಾರರು, ಕಾನೂನು ಉಲ್ಲಂಘಿಸಿ ಫುಟ್‌ಪಾತ್‌ ಮೇಲೆ ಬೈಕ್‌ ಚಲಾಯಿಸುತ್ತಾರೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಹಲವು ಬಾರಿ ಸಣ್ಣ ಪುಟ್ಟ ಅಪಘಾತಗಳು ಕೂಡ ಸಂಭವಿಸುತ್ತಿವೆ. ಈ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಮೊದಲೇ ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ಫುಟ್‌ಪಾತ್‌ ರೈಡ್‌ ಹಾವಳಿಗೆ ಅಂತ್ಯ ಹಾಡಬೇಕಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com