ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣ – ನಾಲ್ವರು ಆರೋಪಿಗಳ ಬಂಧನ

ಮಂಡ್ಯ : ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ವಾಮಿ, ಯೋಗೇಶ್, ಹೇಮಂತ್, ಶಿವರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಸುಪಾರಿ ಕಿಲ್ಲರ್ಸ್ ತಂಡದಿಂದ ಪ್ರಕಾಶ್ ಹತ್ಯೆ ನಡೆದಿರುವ  ಶಂಕೆ ವ್ಯಕ್ತವಾಗಿದೆ. ಸೋಮವಾರ ಮದ್ದೂರಿನ ಟಿಬಿ ಸರ್ಕಲ್ ಬಳಿ ಬೈಕ್ ನಲ್ಲಿ ಬಂದು ಡ್ರ್ಯಾಗನ್ ನಿಂದ  ಜೆಡಿಎಸ್ ಮುಖಂಡನ‌ ಕತ್ತು ಕುಯ್ದು  ಹತ್ಯೆಗೈಯಲಾಗಿತ್ತು.

ವಿವಿಧ ತನಿಖಾ ಆಯಾಮಗಳ ಮೂಲಕ‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದೆ. ಜೆಡಿಎಸ್ ಮುಖಂಡನ ಪ್ರಕಾಶ್ ಹತ್ಯೆ ಹಿನ್ನೆಲೆ ತೊಪ್ಪನಹಳ್ಳಿಗೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಪರಿಸ್ಥಿತಿ ಉದ್ವಿಗ್ನವಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.

ಯಾರೊಂದಿಗೂ ಘಟನೆ ಬಗ್ಗೆ ಮಾತನಾಡದೆ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ನಿನ್ನೆ ರಾತ್ರಿ ಗ್ರಾಮದಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮನೆಯನ್ನ ಜೆಡಿಎಸ್ ಕಾರ್ಯಕರ್ತರು ದ್ವಂಸ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಾದ ಪ್ರಸನ್ನ, ಮುತ್ತುರಾಜು ಮನೆಯನ್ನ ದ್ವಂಸ ಮಾಡಲಾಗಿದೆ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಮೃತ ಪ್ರಕಾಶ್ ನ ಇಬ್ಬರು‌ ಸಂಬಂಧಿಕರನ್ನು ಪ್ರಸನ್ನ, ಮುತ್ತುರಾಜ್ ನೇತೃತ್ವದ ತಂಡ ಕೊಲೆಗೈದಿತ್ತು. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಪ್ರಕಾಶ್ ಕೊಲೆ ನಡೆದಿರೋ ಬಗ್ಗೆ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ತೊಪ್ಪನಹಳ್ಳಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Leave a Reply

Your email address will not be published.