ಹುಷಾರಿಲ್ಲದ ತಿಂಗಳ ಹಸುಗೂಸನ್ನು ಕತ್ತು ಹಿಸಿಕಿ ಕೊಂದು ಮಂಚದ ಕೆಳಗೆ ತಳಿದ ಪ್ರಕರಣದ ರಹಸ್ಯ

ತಿಂಗಳ ಕೂಸನ್ನು ಕುತ್ತಿಗೆ ಬಿಗಿದು ಕೊಂದು, ಮಂಚದ ಕೆಳಗೆ ಶವ ತಳ್ಳಿದ್ದ ಪ್ರಕರಣ ರಹಸ್ಯವಾಗಿಯೇ ಉಳಿದಿದೆ. ಅಮಾಯಕ ಮಗು ಕೌಟುಂಬಿಕ ಕಲಹಕ್ಕೆ ಬಲಿಯಾಗಿರುವುದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ಖಚಿತವಾಗಿದೆಯಾದರೂ, ಅದನ್ನು ಕೊಂದ ಕಟುಕರು ಯಾರೆಂಬುದು ಮಾತ್ರ ನಿಗೂಢವಾಗಿದೆ.

ನೀಲಸಂದ್ರದ ಕಾರ್ತಿಕ್–ಸ್ಟೆಲ್ಲಾ ದಂಪತಿಯ ಮಗು ಶುಕ್ರವಾರ ಸಂಜೆ ಮಂಚದ ಕೆಳಗೆ ಶವವಾಗಿ ಪತ್ತೆಯಾಗಿತ್ತು. ‘ನನ್ನ ಅಪ್ಪ ಚಿತ್ತಾರ್ ರಾಜ್ ಹಾಗೂ ತಮ್ಮ ಅರವಿಂದ್ ಮಗುವನ್ನು ಕೊಂದಿರಬಹುದು’ ಎಂದು ಕಾರ್ತಿಕ್ ಅಶೋಕನಗರ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಅವರಿಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಕಾರ್ತಿಕ್, ಅವರ ತಾಯಿ ವಿಜಯಲಕ್ಷ್ಮಿ ಹಾಗೂ ಸ್ಟೆಲ್ಲಾ ಅವರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

‘ಒಂದು ಮಗುವಿಗೆ ಏಳು ದಿನಗಳಿಂದ ಹುಷಾರಿರಲಿಲ್ಲ. ಚಿಕಿತ್ಸೆ ಕೊಡಿಸಿದರೂ ಸರಿ ಹೋಗಲಿಲ್ಲ. ಹೀಗಾಗಿ, ವೈದ್ಯರನ್ನು ಬದಲಾಯಿಸೋಣ ಎಂಬ ನಿರ್ಧಾರಕ್ಕೆ ಬಂದು ಗುರುವಾರ ಬೆಳಿಗ್ಗೆ ಫ್ರೇಜರ್‌ಟೌನ್‌ನ ಡಾ.ಕೆನೆತ್ ಅವರ ಬಳಿ ತೋರಿಸಿದ್ದೆವು. ‘ಮಗು ಆರೋಗ್ಯವಾಗಿಯೇ ಇದೆ. ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡಿದೆ ಅಷ್ಟೇ. ‌ಸರಿ ಹೋಗುತ್ತದೆ’ ಎಂದಿದ್ದರು. ಆದರೆ, ಸಂಜೆಯಾದರೂ ಆರೋಗ್ಯ ಸುಧಾರಿಸಲೇ ಇಲ್ಲ. ಆ ರಾತ್ರಿಯೆಲ್ಲ ನರಳುತ್ತಲೇ ಇತ್ತು.’  ‘ಶುಕ್ರವಾರ ಮಧ್ಯಾಹ್ನ ಇನ್ನೊಂದು ಮಗುವನ್ನು ಅತ್ತೆ ಹತ್ತಿರ ಕೊಟ್ಟು, ಈ ಮಗುವನ್ನು ಪುನಃ ವೈದ್ಯರ ಬಳಿ ಕರೆದುಕೊಂಡು ಹೋದೆವು. ‘ಮಗು ಚೆನ್ನಾಗಿಯೇ ಇದೆಯಲ್ಲಮ್ಮ. ಸುಮ್ನೆ ಆತಂಕಪಡಬೇಡಿ. ಏನೂ ತೊಂದರೆ ಇಲ್ಲ’ ಎಂದು ಹೇಳಿ ಕಳುಹಿಸಿದರು. ಸಂಜೆ 5.15ಕ್ಕೆ ಮನೆಗೆ ಬಂದು ಮಗುವನ್ನು ನಡುಮನೆಯಲ್ಲಿ ಮಂಚದ ಮೇಲೆ ಮಲಗಿಸಿದ್ದೆ. ಈ ವೇಳೆ ಕಾರ್ತಿಕ್ ಔಷಧ ತರಲು ಮೆಡಿಕಲ್ ಶಾಪ್‌ಗೆ ತೆರಳಿದ್ದರು.’  ‘ಶೌಚಾಲಯಕ್ಕೆ ಹೋದ ನಾನು, 10 ನಿಮಿಷದ ಬಳಿಕ ಆಚೆ ಬಂದೆ. ಎರಡು ದಿನಗಳಿಂದ ಆಸ್ಪತ್ರೆ ಓಡಾಟದಲ್ಲಿದ್ದ ನನಗೆ, ಇನ್ನೊಂದು ಮಗುವನ್ನು ನೋಡುವುದಕ್ಕೂ ಆಗಿರಲಿಲ್ಲ. ಹೀಗಾಗಿ, ಅತ್ತೆ ಹತ್ತಿರ ಹೋಗಿ ಆ ಮಗುವನ್ನೂ ಎತ್ತಿಕೊಂಡೆ. ಆಗ ಅವರು, ‘ನಾನು ವಾಕಿಂಗ್ ಹೋಗಿ ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೊರ ಹೋದರು. ಸ್ವಲ್ಪ ಸಮಯದ ಬಳಿಕ ನನ್ನ ಕೋಣೆಗೆ ವಾಪಸಾದಾಗ ಮಂಚದ ಮೇಲೆ ಮಲಗಿದ್ದ ಮಗು ಇರಲೇ ಇಲ್ಲ.

‘ಇದೇ ವೇಳೆ ಕಾರ್ತಿಕ್ ಸಹ ಮನೆಗೆ ಬಂದರು. ಇಬ್ಬರೂ ಸೇರಿ ಎಲ್ಲ ಕಡೆ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದೆವು. ರಾತ್ರಿ 7.30ಕ್ಕೆ ಇಬ್ಬರು ಪೊಲೀಸರು ಮನೆಗೆ ಬಂದು ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದರು. ಇದೇ ವೇಳೆ ಮಾವ ಕೂಡ ಬಂದರು.’

‘ಮಂಚದ ಕೆಳಗೆ ಹೋದ ಮಾವ, ‘ಇಲ್ಲೇ ಇದ್ದಾನಲ್ಲಮ್ಮ’ ಎನ್ನುತ್ತ ಮಗುವನ್ನು ಹೊರಗೆ ತಂದರು. ಅದರ ಕುತ್ತಿಗೆಗೆ ಶಾಲು ಬಿಗಿಯಲಾಗಿತ್ತು. ಅದರ ಕೈ–ಕಾಲುಗಳೂ ತಣ್ಣಗಾಗಿದ್ದವು. ತಕ್ಷಣ ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ಉಸಿರು ನಿಂತಿರುವುದಾಗಿ ವೈದ್ಯರು ಹೇಳಿದರು. ಯಾರೋ ಹೊರಗಿನವರು ಬಂದು ಈ ಕೃತ್ಯ ಎಸಗಿರಲು ಸಾಧ್ಯವಿಲ್ಲ. ಮನೆಯವರೇ ಹೀಗೆ ಮಾಡಿದ್ದಾರೆ’ ಎನ್ನುತ್ತಾ ಸ್ಟೆಲ್ಲಾ ದುಃಖತಪ್ತರಾದರು.

ಮಗುವನ್ನು ಕೊಂದನಾ ಪಾಪಿ ತಂದೆ..?

‘ಅಪ್ಪ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಪಿಂಚಣಿ ಹಣದಲ್ಲೇ ನಮ್ಮ ಜೀವನ ನಡೆಯುತ್ತಿತ್ತು. ನನಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಇದೇ ವಿಚಾರವಾಗಿ ಮನೆಯಲ್ಲಿ ನಿತ್ಯ ಗಲಾಟೆ ಆಗುತ್ತಿತ್ತು. ಈ ಕಲಹದಿಂದಾಗಿ ತಂದೆ, ತಾಯಿ ಹಾಗೂ ಸೋದರ ಎರಡನೇ ಮಹಡಿಯ ಮನೆಗೆ ವಾಸ್ತವ್ಯ ಬದಲಿಸಿದ್ದರು. ಆಗಾಗ್ಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದರು’ ಎಂದು ಕಾರ್ತಿಕ್ ಹೇಳಿದ್ದಾರೆ.  ‘ಮೊದಲ ಪತ್ನಿಯಿಂದ ಪ್ರತ್ಯೇಕವಾದ ಬಳಿಕ, ನಾನು ಸ್ಟೆಲ್ಲಾಳನ್ನು ಪ್ರೀತಿಸಿ ಮದುವೆ ಆದೆ. ಅದು ಮನೆಯವರಿಗೆ ಇಷ್ಟವಿರಲಿಲ್ಲ. ಆಗಿನಿಂದಲೂ ಮನಃಸ್ತಾಪಗಳು ಇದ್ದೇ ಇದ್ದವು. ಅದೇ ಕೋಪದಲ್ಲಿ ನಮ್ಮ ಮೇಲಿನ ಸಿಟ್ಟಿಗೆ ಮಗುವನ್ನು ಕೊಲೆ ಮಾಡಿರಬಹುದು’ ಎಂದು ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಹುಷಾರಿಲ್ಲದ ಆ ಮಗು ನಿರ್ಲಕ್ಷ್ಯದಿಂದ ಸಾವನ್ನಪ್ಪಿರಬಹುದಾ..?

‘ಹುಷಾರಿಲ್ಲದ ಆ ಮಗುವನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಣ್ಣನೆ ಗಾಳಿ ಬೀಸುತ್ತಿದ್ದರೂ ಸರಿಯಾಗಿ ಬಟ್ಟೆ ಸುತ್ತಿರಲಿಲ್ಲ. ತಾಯಿಯ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ. ಆ ನಂತರ ಇವರೇ ಕುತ್ತಿಗೆಗೆ ಶಾಲು ಸುತ್ತಿ, ಮಂಚದ ಕೆಳಗೆ ತಳ್ಳಿ ನಾಟಕ ತೆಗೆದಿರುವ ಸಾಧ್ಯತೆ ಇದೆ. ಚಿತ್ತಾರ್ ರಾಜ್ ಅಷ್ಟೊಂದು ಕ್ರೂರಿಯಲ್ಲ’ ಎಂದು ಸಂಬಂಧಿಯೊಬ್ಬರು ಹೇಳಿದರು.

ಅವಳಿ ಮಕ್ಕಳನ್ನು ನೋಡಿ ಸಂಭ್ರಮಪಟ್ಟ ಕುಟುಂಬಸ್ಥರು

‘ಅಣ್ಣನಿಗೆ ಕಾರ್ತಿಕ್–ಸ್ಟೆಲ್ಲಾ ಎಂದರೆ ತುಂಬ ಒಲವು. ಪ್ರೀತಿಗಾಗಿ ಮಗ ಕ್ರೈಸ್ತ ಧರ್ಮವನ್ನು ಸೇರಿದಾಗಲೂ ಅವರು ಬೇಸರಪಟ್ಟಿರಲಿಲ್ಲ. ಸ್ಟೆಲ್ಲಾಳ ಸೀಮಂತ ಕಾರ್ಯಕ್ರಮವನ್ನು ಸಡಗರದಿಂದ ನಡೆಸಿದ್ದರು. ಅವಳಿ ಮಕ್ಕಳು ಜನಿಸಿದಾಗ ನಮಗೆಲ್ಲ ಕರೆ ಮಾಡಿ ಸಂತಸ ಹಂಚಿಕೊಂಡಿದ್ದರು. ಅಂಥವರ ಮೇಲೆ ದಂಪತಿ ಅನುಮಾನಪಟ್ಟಿರುವುದು ಬೇಸರವಾಗುತ್ತದೆ. ಆದರೆ, ಮಗುವನ್ನು ಕೊಂದವರು ಯಾರೇ ಆಗಿದ್ದರೂ ಕಠಿಣ ಶಿಕ್ಷೆಯಾಗಬೇಕು’ ಎಂದು ಚಿತ್ತಾರ್ ರಾಜ್ ಸೋದರಿ ನೀಲಾ ಆಗ್ರಹಿಸಿದರು.

‘ಮನೆಯಲ್ಲಿ ಇರಲೇ ಇಲ್ಲ’

ಹತ್ತು ನಿಮಿಷದಲ್ಲಿ ಮಗು ಅಪಹರಣವಾಯಿತು ಎಂದು ಸ್ಟೆಲ್ಲಾ ಹೇಳುತ್ತಿದ್ದಾರೆ. ಆ ಸಮಯದಲ್ಲಿ ಚಿತ್ತಾರ್ ರಾಜ್ ಹಾಗೂ ಅರವಿಂದ್ ಮನೆಯಲ್ಲಿ ಇರಲೇ ಇಲ್ಲ. ಹೀಗಿರುವಾಗ, ಯಾವ ಆಧಾರದ ಮೇಲೆ ಅವರ ಮೇಲೆ ಆರೋಪ ಮಾಡಿದ್ದಾರೆ. ಕೆಲಸಕ್ಕೆ ಹೋಗುವಂತೆ ಬೈಯ್ಯುತ್ತಿದ್ದ ಕಾರಣಕ್ಕೇ ಅಪ್ಪನ ಮೇಲೇ ಕಾರ್ತಿಕ್ ಈ ರೀತಿ ತಿರುಗಿಬಿದ್ದಿರಬಹುದು. ಅದು ನಮ್ಮ ಮನೆ ಮಗು. ಅದು ಹೇಗೆ ಸತ್ತು ಹೋಯಿತು ಎಂಬುದು ಎಲ್ಲರಿಗೂ ಗೊತ್ತಾಗಲೇಬೇಕು’ ಎಂದು ಸಂಬಂಧಿ ರಾಮ್‌ದಾಸ್ ‌ಆಕ್ರೋಶದಿಂದಲೇ ಹೇಳಿದರು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘ಉಸಿರುಗಟ್ಟಿಸಿ ಸಾಯಿಸಲಾಗಿದೆ’ ಎಂದು ಹೇಳಿದ್ದಾರೆ. ಕೊಲೆ (ಐಪಿಸಿ 302), ಸಾಕ್ಷ್ಯನಾಶ (201) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ.

Leave a Reply

Your email address will not be published.

Social Media Auto Publish Powered By : XYZScripts.com