‘ರಾಜೀವ್ ಗಾಂದಿಗೆ ನೀಡಲಾದ ಭಾರತ ರತ್ನ ಗೌರವ ಹಿಂಪಡೆಯಬೇಕು’ : ದಿಲ್ಲಿ ಅಸೆಂಬ್ಲಿ ನಿರ್ಣಯ ಅಂಗೀಕಾರ

ರಾಜೀವ್ ಗಾಂದಿಗೆ ನೀಡಲಾದ ಭಾರತ ರತ್ನ ಗೌರವ ಹಿಂಪಡೆಯಬೇಕು ಎಂಬ ಬಗ್ಗೆ ದಿಲ್ಲಿ ಅಸೆಂಬ್ಲಿ ನಿರ್ಣಯ ಅಂಗೀಕರಿಸಿದ ಸುತ್ತ ಎದ್ದಿರುವ ಗೊಂದಲ ಅತ್ಯಂತ ವಿಷಾದನೀಯ.

ರಾಜೀವ್ ಗಾಂಧಿಯನ್ನು ಕೊಂದಿದ್ದು ದೇಶ ವಿರೋಧಿ ಶಕ್ತಿಗಳು, ಅದಕ್ಕಿಂತಲೂ ಹೆಚ್ಚಾಗಿ ಭಯೋತ್ಪಾದಕರು ಎಂಬ ಕನಿಷ್ಟ ಜ್ಞಾನ ಆಪ್‌ ನಾಯಕರಿಗೆ ಇಲ್ಲದೇ ಹೋಗಿದ್ದು ದೊಡ್ಡ ದುರಂತ.

ವ್ಯಕ್ತಿಗತವಾಗಿ ಅಥವಾ ರಾಜಕೀಯ ನೆಲೆಗಟ್ಟಿನಲ್ಲಿ ರಾಜೀವ್ ಗಾಂದಿಯವರನ್ನು ವಿಶ್ಲೀಷಿಸಲು ಎಲ್ಲರಿಗೂ ಹಕ್ಕಿದೆ. ಆದರೆ ಓರ್ವ ನಾಯಕ ಇಲ್ಲ ಎಂದಾದಾಗ ಸಮಷ್ಠಿ ರೂಪದಲ್ಲಿ ಆತನನ್ನು ನೋಡಬೇಕಾದುದು ಎಲ್ಲರ ಕರ್ತವ್ಯ.

ನಿಜ., ರಾಜಕೀಯ ಮುಖಂಡನಾಗಿ ರಾಜೀವ್ ಗಾಂದಿ ತೆಗೆದುಕೊಂಡ ಕೆಲವು ನಿರ್ಧಾರಗಳು ಹಲವರಿಗೆ ಅಪಥ್ಯವಾಗಿರಬಹುದು. ಆದರೆ ಈ ಅಪಸವ್ಯಗಳೇ ರಾಜೀವರನ್ನು ಅಳೆಯಲು ಮಾನದಂಡವಾಗಬಾರದು.

ಶ್ರೀಲಾಂಕಾದ ತಮಿಳು ಭಯೋತ್ಪಾದಕರು ಗುರುತೇ ಸಿಗದಂತೆ ರಾಜೀವರನ್ನು ಹತ್ಯೆ ಮಾಡಿದರು. ಆಗ ಇಡೀ ದೇಶ ಅದಕ್ಕಾಗಿ ಕೊರಗಿತ್ತು. ನನಗೆ ಭಾರತರತ್ನ ಕೊಡಿ ಎಂದು ರಾಜೀವರೇನೂ ಅರ್ಜಿ ಹಾಕಿರಲಿಲ್ಲ. ಆದರೆ ಓರ್ವ ನಾಯಕನಿಗೆ ನೀಡಬೇಕಾದ ಸಮ್ಮಾನ ಅದಾಗಿತ್ತು.

ಇಂದು 18 ದಾಟಿದ ಓರ್ವ ಯುವಕ/ತಿ ಮತ ಹಾಕಲು ಅರ್ಹ ಎಂಬ ಕಾನೂನಿದ್ದರೇ ಅದಕ್ಕೆ ರಾಜೀವ್ ಕಾರಣ. ಅದೇ ರೀತಿ ದೇಶದಲ್ಲಾದ ಐಟಿ ಕ್ರಾಂತಿಯ ಮೊಳಕೆಯೊಡೆದದ್ದು ಅವರ ಕಾಲದಲ್ಲಿಯೇ ಎಂಬುದನ್ನು ಯಾರೂ ಮರೆಯುವಂತಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಆಂತರಿಕ ಪ್ರತಿರೋಧ ಲೆಕ್ಕಿಸದೇ ದೇಶದ ಭದ್ರತೆಯ ದೃಷ್ಟಿಯಿಂದ ನೆರೆಯ ಲಂಕಾದಲ್ಲಿ ತಮಿಳು ಉಗ್ರಗಾಮಿತ್ವ ಸದೆಬಡಿಯಲು ರಾಜೀವ್ ಭಾರತೀಯ ಪಡೆಗಳನ್ನು ನಿಯೋಜಿಸುವ ದಿಟ್ಟ ನಿರ್ಧಾರ ಕೈಗೊಂಡ ನಾಯಕನೂ ಹೌದು.

ಅಂದು ಅವರು ಆ ನಿರ್ಧಾರ ಕೈಗೊಳ್ಳದೇ ಹೋಗಿದ್ದರೇ ಇವತ್ತು ಚೀನಾವು ಲಂಕೆಯನ್ನು ಭಾರತ ವಿರೋಧಿ ಶಕ್ತಿಯನ್ನಾಗಿ ಪೋಶಿಸುತ್ತಿತ್ತು ಎಂಬ ವಿಷಯವನ್ನು ರಾಜತಾಂತ್ರಿಕ ಸೂಕ್ಷ್ಮತೆ ಅರಿತ ನಾಯಕರಾರು ಕಡೆಗಣಿಸಲು ಸಾಧ್ಯವಿಲ್ಲ.

ಜನರ ನಿತ್ಯದ ಬದುಕಿನಲ್ಲಿ ಬದಲಾವಣೆ ತರುತ್ತೇವೆಂದು ನಂಬಿಸಿ ದಿಲ್ಲಿಯಲ್ಲಿ ಅಧಿಕಾರದ ನೊಗ ಹಿಡಿದ ಅರವಿಂದ ಕೇಜ್ರೀವಾಲರ ಆಪ್‌  ಈ ಗೊಂದಲಕ್ಕೆ ಆಸ್ಪದ ನೀಡದ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು.

ಖುದ್ದು ನಾನಾ ಅಪವಾದಗಳಿಗೆ ತುತ್ತಾಗಿರುವ ಸೋಮನಾಥ ಭಾರ್ತಿ (ಆಪ್ ಮುಖಂಡರೇ ಹೇಳುವಂತೆ) ಸರಕಾರ ಮಂಡಿಸುವ ವಿಧೇಯಕದ ಮೇಲೆ ಟಿಪ್ಪಣಿ ಬರೆದು ಗೆದ್ದಂತೆ ಬಿಂಬಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.

ದಿಲ್ಲಿ ಸರಕಾರ ಸ್ಪಷ್ಟನೆ ನೀಡುವ ವೇಳೆಗೆ ಜನರ ಭಾವನೆಯ ಹಕ್ಕಿ ರೆಕ್ಕೆ ಬಿಚ್ಚಿ ಹಾರಾಗಿದೆ. ಆಪ್ ಖಳನಾಯನ ಸ್ಥಾನದಲ್ಲಿ ನಿಂತಿದೆ. ಕನಿಷ್ಟ ಈಗಲಾದರೂ ಅರವಿಂದ ಕೇಜ್ರೀವಾಲರು ಇಡೀ ಪ್ರಕರಣದ ಬಗ್ಗೆ ವಿವರಣೆ ನೀಡಬೇಕಿದೆ ಹಾಗೂ ದೇಶ ಅದನ್ನು ಬಯಸುತ್ತದೆ.

ಆಚಾರವಿಲ್ಲದ ನಾಲಗೆ ಹಾಗೂ ವಿಚಾರವಿಲ್ಲದ ಕ್ರಿಯೆಗೆ ಎಂದೂ ಬೆಲೆ ಇಲ್ಲ. ನೆನಪಿರಲಿ.

Leave a Reply

Your email address will not be published.

Social Media Auto Publish Powered By : XYZScripts.com