ಹಫೀಜ್ ಸಯೀದ್‌ನ ರಕ್ಷಿಸುತ್ತೇನೆಂದ ಇಮ್ರಾನ್‌ ಸಂಪುಟದ ಸಚಿವನ ವಿಡಿಯೋ ಬಹಿರಂಗ

ಪಾಕಿಸ್ತಾನದ ನಿಜಮುಖ ಮತ್ತೊಮ್ಮೆ ಬಯಲಾಗಿದೆ. ಸರ್ಕಾರ ಬದಲಾದರೂ ಪಾಕಿಸ್ತಾನದ ಬುದ್ಧಿ ಬದಲಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇನೆ ಎಂದು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಇಮ್ರಾನ್ ಖಾನ್ ಹೇಳಿದ್ದರು. ಆದರೆ ಅವರದೇ ಸರ್ಕಾರದ ಸಚಿವರೊಬ್ಬರು ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸಯೀದ್‌ ಹಾಗೂ ಆತನ ಪಕ್ಷವನ್ನು ರಕ್ಷಿಸುವ ಭರವಸೆ ನೀಡುವ ವಿಡಿಯೋವೊಂದು ಬಹಿರಂಗಗೊಂಡಿದೆ.

ಆ ವಿಡಿಯೋದಲ್ಲಿ ಆಂತರಿಕ ಸಚಿವ ಶೆಹರ್ಯಾರ್ ಆಫ್ರಿದಿ ಅವರು ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ನಾಯಕರ ಜತೆ ಮಾತನಾಡುತ್ತಾರೆ. ಮಾತಿನ ಮಧ್ಯೆ, ಅಮೆರಿಕದ ಒತ್ತಡದಿಂದಾಗಿ ಚುನಾವಣಾ ಆಯೋಗ (ಇಸಿಪಿ) ಇನ್ನೂ ಉಗ್ರ ಹಫೀಜ್‌ನ ಪಕ್ಷವನ್ನು ನೋಂದಣಿ ಮಾಡದಿರುವುದರ ಬಗ್ಗೆ ಹಾಗೂ ಆಯೋಗ ಅದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಯೋಜಿಸಿರುವ ಬಗ್ಗೆ ಸಚಿವರ ಗಮನ ಸೆಳೆಯಲಾಗುತ್ತದೆ. ಆಗ ಸಚಿವ ಆಫ್ರಿದಿ, ನಾವು ಇದು ನಡೆಯಲು ಬಿಡುವುದಿಲ್ಲ ಎಂದು ಹೇಳುತ್ತಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಸರ್ಕಾರ ಅಧಿಕಾರದಲ್ಲಿ ಇರುವ ತನಕ ಹಫೀಜ್ ಸಯೀದ್ ಸಹಿತ ಪಾಕಿಸ್ತಾನದ ಪರವಾಗಿ ಧ್ವನಿಯೆತ್ತುವವರ ಜತೆಗೆ ನಾವಿರುತ್ತೇವೆ ಎಂದೂ ಹೇಳಿದ್ದಾರೆ.
2008ರ ಮುಂಬೈ ದಾಳಿಯ ಬಳಿಕ ಹಫೀಜ್ ಸಯೀದ್‌ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಹಾಗೂ ವಿಶ್ವಸಂಸ್ಥೆ ಘೋಷಿಸಿವೆ. ಆ ಬಳಿಕ ಪಾಕಿಸ್ತಾನ ಆತನನ್ನು ಕೆಲಸ ಸಮಯ ಗೃಹ ಬಂಧನದಲ್ಲೂ ಇರಿಸಿತ್ತು.

2017ರ ಆಗಸ್ಟ್ ನಲ್ಲಿ ಸಯೀ ಎಂಎಂಎಲ್ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷವನ್ನೂ ಆರಂಭಿಸಿದ್ದ. 2018ರ ಏಪ್ರಿಲ್‌ನಲ್ಲಿ ಅಮೆರಿಕವು ಲಷ್ಕರ್ ಜತೆಗೆ ನಂಟು ಹೊಂದಿದೆ ಎಂಬ ಕಾರಣಕ್ಕೆ ಎಂಎಂಎಲ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆಯ ಪಟ್ಟಿಯಲ್ಲಿ ಸೇರಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com