ಪ್ರಧಾನಿ ಮೋದಿಯ 84 ವಿದೇಶ ಪ್ರವಾಸಗಳಿಗೆ ಆಗಿರುವ ವೆಚ್ಚ 2,014 ಕೋಟಿ ರೂ..!

ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ದೇಶದೇಶ ಸುತ್ತುತ್ತಲೇ ಬಂದ ಪ್ರಧಾನಿ ನರೇಂದ್ರ ಮೋದಿ ಈ ತನಕ 84 ಬಾರಿ ವಿದೇಶ ಪ್ರವಾಸ ಮಾಡಿದ್ದು ಇದಕ್ಕಾಗಿ ತಗುಲಿರುವ ಒಟ್ಟು ವೆಚ್ಚ 2,014 ಕೋಟಿ ರೂ. ಆಗಿದೆ.


ನರೇಂದ್ರ ಮೋದಿ ಸರ್ಕಾರ ತನ್ನ ಪ್ರಮುಖ ಯೋಜನೆಗಳು, ಸಾಧನೆಗಳ ಜಾಹೀರಾತುಗಳಿಗಾಗಿ 4,603 ಕೋಟಿ ರೂ. ನಷ್ಟು ಜನರ ತೆರಿಗೆ ಹಣವನ್ನು ವೆಚ್ಚ ಮಾಡಿದೆ. ಇದು ಸ್ವತಃ ಸರ್ಕಾರವೇ ನೀಡಿರುವ ಅಂಕಿಅಂಶಗಳಾಗಿವೆ.


ಪ್ರತಿ ಪ್ರವಾಸಕ್ಕೆ ಮಾಡಿರುವ ವೆಚ್ಚವು ಏರ್ ಇಂಡಿಯಾ ಒನ್ ವಿಮಾನದ ನಿರ್ವಹಣಾ ವೆಚ್ಚ ಹಾಗೂ ಸುರಕ್ಷಿತ ಹಾಟ್‌ಲೈನ್ ವ್ಯವಸ್ಥೆಗೊಳಿಸುವುದನ್ನು ಒಳಗೊಂಡಿತ್ತು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ವಿಕೆ ಸಿಂಗ್ ಅವರು ಸಂಸತ್ತಿಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ. ಜಾಹೀರಾತಿನ ವೆಚ್ಚದ ವಿವರವನ್ನು ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ರಾಜ್ಯವರ್ಧನ್ ರಾಥೋಡ್ ಸಂಸತ್ತಿಗೆ ನೀಡಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆಯಂತಹ ಕೆಲವು ಜಾಗತಿಕ ನಾಯಕರನ್ನು ಅನೇಕ ಬಾರಿ ಭೇಟಿಯಾಗಿದ್ದಾರೆ. ಜಾಗತಿಕ ವ್ಯವಹರಾದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವುದು ಹಾಗೂ ವ್ಯೂಹಾತ್ಮಕ ಹಿತಾಸಕ್ತಿಗಳನ್ನು ಸುಭದ್ರಗೊಳಿಸುವುದು ಈ ಪ್ರವಾಸಗಳ ಉದ್ದೇಶಗಳಾಗಿದ್ದವು.


ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ವುಹಾನ್‌ ನಗರದಲ್ಲಿ ನಡೆಸಿದ ಅನೌಪಚಾರಿಕ ಸಭೆಯಂತಹ ಕೆಲವು ಪ್ರವಾಸಗಳು ರಾಜತಾಂತ್ರಿಕ ಯಶಸ್ಸು ತಂದುಕೊಟ್ಟಿದ್ದವು.
ಅಪನಗದೀಕರಣ ಕ್ರಮ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದರು. ದೇಶದ ಜನರು ಬ್ಯಾಂಕ್‌ಗಳೆದುರು ಕ್ಯೂ ನಿಂತಿದ್ದಾಗ ಪ್ರಧಾನಿ ವಿದೇಶ ಪ್ರವಾಸ ನಡೆಸಿದ್ದು ಟೀಕೆಗೆ ಗುರಿಯಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com