ವಜಾಗೊಂಡ 51 ದಿನಗಳ ಬಳಿಕ ಮತ್ತೆ ಶ್ರೀಲಂಕಾ ಪ್ರಧಾನಿ ಪಟ್ಟವೇರಿದ ರನಿಲ್ ವಿಕ್ರಮಸಿಂಘೆ ..

ವಜಾಗೊಂಡಿದ್ದ ರನಿಲ್ ವಿಕ್ರಮಸಿಂಘೆ ಅವರು ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ 51 ದಿನಗಳ ಶ್ರೀಲಂಕಾ ರಾಜಕೀಯದ ಬಿಕ್ಕಟ್ಟಿಗೆ ಕೊನೆಗೂ ತೆರೆ ಬಿದ್ದಿದೆ.


ಅಕ್ಟೋಬರ್ 26ರಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನು ಏಕಾಏಕಿಯಾಗಿ ವಜಾಗೊಳಿಸಿದ್ದರು. ಆದರೆ ವಿಕ್ರಮಸಿಂಘೆ ಹುದ್ದೆ ಬಿಟ್ಟುಕೊಡಲು ನಿರಾಕರಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸೆಗೆ ಪ್ರಮಾಣವಚನವನ್ನೂ ಬೋಧಿಸಲಾಗಿತ್ತು. ರಾಜಪಕ್ಸೆ ಸರ್ಕಾರ ಕೆಲವೇ ದಿನಗಳಲ್ಲಿ ಸಂಸತ್ತನ್ನು ವಜಾಗೊಳಿಸಲು ಶಿಫಾರಸು ಮಾಡಿತ್ತು. ಅಧ್ಯಕ್ಷ ಸಿರಿಸೇನಾ ಅದನ್ನು ಅನುಮೋದಿಸಿ ಸಂಸತ್ ವಜಾಗೊಳಿಸಿ ಹೊಸದಾಗಿ ಚುನಾವಣೆಗೆ ಆದೇಶಿಸಿದರು.
ಆದರೆ ಶ್ರೀಲಂಕಾ ಸುಪ್ರೀಂಕೋರ್ಟ್ ಅಧ್ಯಕ್ಷರ ತೀರ್ಮಾನವನ್ನೇ ರದ್ದುಗೊಳಿಸಿ ಬಹುಮತ ಸಾಬೀತುಗೊಳಿಸುವಂತೆ ರಾಜಪಕ್ಸೆ ಸರ್ಕಾರಕ್ಕೆ ಸೂಚಿಸಿತು. ಆದರೆ ಬಹುಮತ ಸಾಬೀತುಪಡಿಸುವಲ್ಲಿ ರಾಜಪಕ್ಸೆ ವಿಫಲರಾದರು.
ಇದೀಗ ಅಂತಿಮವಾಗಿ ಅಧ್ಯಕ್ಷ ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನೇ ಪ್ರಧಾನಿಯಾಗಿ ನಿಯುಕ್ತಿಗೊಳಿಸಿ ಪ್ರಮಾಣವಚನ ಬೋಧಿಸಿದ್ದಾರೆ.

Leave a Reply

Your email address will not be published.