ಒಂದಾಯಿತು ಎರಡು ಬ್ಯಾಡ್ಮಿಂಟನ್ : ಹಸೆಮಣೆ ಏರಿದ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್ ಜೋಡಿ

ಒಂದಾಗಿವೆ ಎರಡು ಬ್ಯಾಡ್ಮಿಂಟನ್ಸ್. ಏನಿದು ಎರಡು ಬ್ಯಾಡ್ಮಿಂಟನ್ಸ್ ಅನ್ಕೊಂಡ್ರಾ..? ಹೌದು.. ಮುಂಬೈನಲ್ಲಿ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ನಂತರ ಅದ್ಧೂರಿ ವಿವಾಹದ ಫೋಟೋ ಟ್ವೀಟ್ ಮಾಡಿರುವ ಸೈನಾ ನೆಹ್ವಾಲ್, ‘ನನ್ನ ಜೀವನದ ಅತ್ಯುತ್ತಮ ಪಂದ್ಯ’ ಎಂದು ಬರೆದುಕೊಂಡಿದ್ದಾರೆ. ಈ ಮುಂಚೆ ಡಿಸೆಂಬರ್ 16ರಂದು ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು ಎನ್ನಲಾಗಿತ್ತು. ಆದರೆ ಸೈನಾ ಇಂದೇ ಕಶ್ಯಪ್ ಕೈಹಿಡಿದಿದ್ದು, ಸಮಾರಂಭದಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು ಎನ್ನಲಾಗಿದೆ.

ವಿವಾಹದ ಧಾರ್ಮಿಕ ಕಾರ್ಯಕ್ರಮದ ಕೆಲ ಚಿತ್ರಗಳನ್ನು ಪರುಪಳ್ಳಿ ಕಶ್ಯಪ್‌ ಇನ್‌ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಸಮಯಗಳ ಹಿಂದೆಯಷ್ಟೇ ಕಶ್ಯಪ್ ಜತೆಗಿನ ಪ್ರೇಮ ವಿಚಾರವನ್ನು ಸೈನಾ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು. ವಿವಾಹಕ್ಕೆ ಕೇವಲ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರನ್ನು ಮಾತ್ರ ಕರೆಯಲಾಗಿತ್ತು. ಆರತಕ್ಷತೆಯಲ್ಲಿ ಕ್ರೀಡಾಪಟುಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಬ್ಯಾಡ್ಮಿಂಟನ್‌ ಅಭಿಮಾನಿಗಳಿಗೆ ಇದು ಸಂಭ್ರಮದ ಕ್ಷಣ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಯಾವುದೇ ವಿಶ್ವಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿಯಿರಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌, ಪುರುಷರ ಸಿಂಗಲ್ಸ್‌ನಲ್ಲಿ ಪರುಪ್ಪಳ್ಳಿ ಕಶ್ಯಪ್‌ ಭಾರತದ ಬ್ಯಾಡ್ಮಿಂಟನ್‌ನ ಭರವಸೆಯ ಸ್ಪರ್ಧಿಗಳು ಎಂದೇ ಗುರುತಿಸಿಕೊಂಡಿದ್ದಾರೆ.ಪಿ.ವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಳ್ಳುವ ಮೊದಲು ಸೈನಾ, ಭಾರತ ಬ್ಯಾಡ್ಮಿಂಟನ್‌ನ ಮುಖ್ಯ ತಾರೆಯಾಗಿ ಮಿಂಚಿದ್ದರು. ಅವರ ಬ್ರ್ಯಾಂಡ್‌ ಮೌಲ್ಯ ಸಾಕಷ್ಟು ಎತ್ತರಕ್ಕೆ ಏರಿತ್ತು. ಆ ನಂತರ ಅವರು ಗಾಯದ ಸಮಸ್ಯೆಯಿಂದ ಫಾರ್ಮ್‌ ಕಳೆದುಕೊಂಡರು. ಆದರೆ ಅವರು ಬಹಳಷ್ಟು ದಿನ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನವನ್ನು ಕಾಪಾಡಿಕೊಂಡಿದ್ದರು. 2015ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇಲ್ಲಿಯವರೆಗೂ ಅವರು 20 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ ಒಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕೂಡ ಸೇರಿದೆ.

ಪ್ರಸಕ್ತ ಬಿಡಬ್ಲ್ಯುಎಫ್‌ (ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ) ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪರುಪಳ್ಳಿ ಕಶ್ಯಪ್‌ 57ನೇ ಸ್ಥಾನದಲ್ಲಿ ಇದ್ದಾರೆ. ಸೈನಾ, ಹತ್ತನೇ ಸ್ಥಾನದಲ್ಲಿ ಇದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಬ್ಯಾಡ್ಮಿಂಟನ್‌ ಆಟಗಾರ್ತಿ ಎಂಬ ಶ್ರೇಯ ಸೈನಾ ಅವರದ್ದು. ವಿಶ್ವ ಮಟ್ಟದಲ್ಲಿ ಭಾರತದ ಬ್ಯಾಡ್ಮಿಂಟನ್‌ ಕೀರ್ತಿ ಪತಾಕೆ ಹಾರಿಸಿರುವುದರಲ್ಲಿ ಸೈನಾ ಅವರ ಕೊಡುಗೆ ಸಾಕಷ್ಟಿದೆ. ಈ ಜೋಡಿಗಳು 2005ರಿಂದ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com